ಬೀದರ್ | ಬಜೆಟ್ ನಲ್ಲಿ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಲು ದಲಿತ ವಿದ್ಯಾರ್ಥಿ ಪರಿಷತ್‌ನಿಂದ ಮನವಿ

ಬೀದರ್ : ಬಜೆಟ್ ನಲ್ಲಿ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಮನವಿ ಮಾಡಿದೆ.
ಇಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮಾ.7 ರಂದು ಮಂಡಿಸಲಿರುವ 2025 ನೇ ಸಾಲಿನ ಬಜೆಟ್ ನಲ್ಲಿ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಬೇಕು. ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಸಿಗುವ ಅಲ್ಪ ಸ್ವಲ್ಪ ವಿದ್ಯಾರ್ಥಿ ವೇತನವು ತಡೆಹಿಡಿರುವುದು ಖಂಡನೀಯವಾಗಿದೆ. 2019-20ನೇ ಸಾಲಿನಿಂದ ಕೇಂದ್ರ ಸರ್ಕಾರವು ಮ್ಯಾನೇಜ್ಮೆಂಟ್ ಕೂಟದ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುವುದು ನಿಲ್ಲಿಸಿದೆ ಎಂದು ದೂರಲಾಗಿದೆ.
ಸರ್ಕಾರಿ ಕಾಲೇಜುಗಳು ಇದ್ದರೂ ಕೂಡ ಶೇ.80ರಷ್ಟು ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳನ್ನೇ ಅವಲಂಬಿತರಾಗಿದ್ದಾರೆ. ಇದರಿಂದ 2019 ರಿಂದ ದಲಿತ ವಿದ್ಯಾರ್ಥಿಗಳ ಶಿಕ್ಷಣ ಮಟ್ಟ ಕೂಡ ಶೇ.40 ರಷ್ಟು ಕಡಿಮೆಯಾಗಿದೆ ಎಂದು ಆರೋಪಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಮ್ಯಾನೇಜ್ಮೆಂಟ್ ಕೂಟದ ವಿದ್ಯಾರ್ಥಿ ವೇತನದ ಪೂರ್ಣ ಪ್ರಮಾಣದ ಹಣ ರಾಜ್ಯ ಸರ್ಕಾರವೇ ಭರಿಸಿ ವಿದ್ಯಾರ್ಥಿ ವೇತನ ನೀಡುವುದನ್ನು ಪ್ರಾರಂಭಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ಶಾಲೆ ಮತ್ತು ವಸತಿ ನಿಲಯಗಳನ್ನು ಹೆಚ್ಚಿಸಬೇಕು. ರಾಜ್ಯಾದ್ಯಂತ ಸರ್ಕಾರಿ ವಸತಿ ನಿಲಯಗಳಲ್ಲಿ ಆಹಾರಕ್ಕೆ ಸಂಭಂಧಸಿದಂತೆ ಹಲವಾರು ದೂರುಗಳು ಬರುತ್ತಿವೆ. ಆಹಾರದ ಗುಣಮಟ್ಟ ಹೆಚ್ಚಿಸಬೇಕು. ಹಾಗೆಯೇ ಕಳಪೆ ಗುಣಮಟ್ಟದ ಆಹಾರ ನೀಡುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಸರ್ಕಾರದಿಂದ ನಡೆಯುವ ವಸತಿ ನಿಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಪ್ರಾರಂಭಿಸಬೇಕು. ವಸತಿ ನಿಲಯಗಳಲ್ಲಿ ಹೈಟೆಕ್ ಗ್ರಂಥಾಲಯಗಳು ತೆರೆಯಬೇಕು. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 2 ರಿಂದ 3 ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ನಿರ್ಮಾಣ ಮಾಡಬೇಕು. ಬೆಲೆಯೇರಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡ ಹೆಚ್ಚಿಸಬೇಕು. ಪದವಿ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ವಿದ್ಯಾರ್ಥಿ ವೇತನ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ವಿದ್ಯಾರ್ಥಿವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮಾಲೆ, ಜಿಲ್ಲಾ ಸಂಘಟನಾ ಸಂಚಾಲಕ ಸಂದೀಪ್ ವಾಲ್ದೊಡ್ಡಿ, ತಾಲ್ಲೂಕು ಸಂಚಾಲಕ ಅಮರನಾಥ್ ಹುಡುಗೆ ಹಾಗೂ ಸುದೀಪ್ ಮೇಟಿ ಹಾಜರಿದ್ದರು.







