ಬೀದರ್ | ವಿಧವಾ, ವೃದ್ಧಾಪ್ಯ, ಅಂಗವಿಲರ ವೇತನಕ್ಕೆ ಆದಾಯ ಮಿತಿ ಹೆಚ್ಚಿಸಲು ಆಗ್ರಹಿಸಿ ಮನವಿ

ಬೀದರ್ : ರಾಜ್ಯ ಸರ್ಕಾರವು ಅಂಗವಿಕಲರ ಮಾಶಾಸನ, ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಬರುವುದನ್ನು ತಡೆ ಹಿಡಿದು, 32,000ರೂ. ಆದಾಯದ ಮಿತಿ ಹೊಂದಿರುವವರು ಮಾತ್ರ ಮಾಶಾಸನಕೆ ಅರ್ಹರಿರುತ್ತಾರೆ ಎಂದು ಹೊರಡಿಸಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.
ಬೀದರ್‌ನ ತಹಶಿಲ್ದಾರ್ ಅವರ ಮೂಲಕ ಮಂಗಳವಾರ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಂಗವಿಕಲರ ಮಾಶಾಸನ, ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಬರುವುದನ್ನು ತಡೆ ಹಿಡಿದು, 32,000 ರೂ. ಆದಾಯದ ಮಿತಿ ಮಾಡಿರುವುದು 1ಲಕ್ಷ 20 ಸಾವಿರ ರೂ. ಗೆ ಹೆಚ್ಚಿಸಬೇಕು. ಕಾರಣ ಅಂಗವಿಕಲರ, ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನದಾರರಿಗೆ ಸರಕಾರ ಹೊರಡಿಸಿರುವ ಆದೇಶದಿಂದ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಬಹಳಷ್ಟು ಅಂಗವಿಕಲರು, ವಿಧವೆಯರು ಹಾಗೂ ವೃದ್ಧರು ಸರಕಾರದಿಂದ ಬರುವ ಮಾಶಾಸನದ ಮೇಲೆಯೇ ಅವಲಂಬಿತರಾಗಿದ್ದು, ಕಾಯಿಲೆಗಳಿಂದ ಬಳಲುತ್ತಿರುವವರು ಮಾಶಾಸನದಿಂದಲೇ ಔಷಧಿಗಳು ತೆಗೆದುಕೊಳ್ಳುತ್ತಿದ್ದಾರೆ. ಏಕಾಏಕಿ ಸರಕಾರ ಆದೇಶ ಹೊರಡಿಸಿರುವುದರಿಂದ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಿ ಕಚೇರಿಯಿಂದ ಮನೆಗೆ ಮನೆಯಿಂದ ಕಚೇರಿಗೆ ತಿರುಗುವಂತಾಗಿದೆ ಎಂದು ಆರೋಪಿಸಲಾಗಿದೆ.
ಸರಕಾರವು ಈ ಆದೇಶವನ್ನು ರದ್ದುಗೊಳಿಸಿ 1ಲಕ್ಷ 20 ಸಾವಿರಕ್ಕೆ ಆದಾಯದ ಮಿತಿಯನ್ನು ಹೆಚ್ಚಿಸಿ, ಅರ್ಹ ಫನಾನುಭವಿಗಳಿಗೆ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳವುದಕ್ಕೆ ಅನುವು ಮಾಡಿಕೊಡಬೇಕು. ಹಾಗೆಯೇ ಪ್ರತ್ಯೇಕ ಜಿಲ್ಲೆಯಲ್ಲಿ ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಂಗವಿಕಲ ಘಟಕದ ರಾಜ್ಯಾಧ್ಯಕ್ಷ ಮಂಗಲೇ ಮರ್ಕಲೆ, ಕಲ್ಯಾಣ ಕರ್ನಾಟಕ ಕಲಬುರ್ಗಿ ವಿಭಾಗ ಅಧ್ಯಕ್ಷ ಸಂಗಮೇಶ್ ಭಾವಿದೊಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ಶಿವಕುಮಾರ್ ಶಾಹಾಪೂರೆ, ಜಿಲ್ಲಾ ಕಾರ್ಯದರ್ಶಿ ಎಮ್.ಡಿ. ಸಿರಾಜ್, ಸದಸ್ಯರಾದ ಶ್ರೀಕಾಂತ್ ಡೋಣೆ, ಜಗದೇವಿ, ಬೀರಗೊಂಡ, ಕವಿತಾ ಡೋಣೆ, ವೀರಶೆಟ್ಟಿ ಕೌಡಗೆ ಹಾಗೂ ರಂಗಮ್ಮ ಉಪಸ್ಥಿತರಿದ್ದರು.






