Bidar | ಅಂಬೇಡ್ಕರ್ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡುವಂತೆ ಸಚಿವ ಈಶ್ವರ್ ಖಂಡ್ರೆಗೆ ಮನವಿ

ಬೀದರ್: ನಗರದ ಕುಂಬಾರವಾಡದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರಮಾತಾಯಿ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಭಾಲ್ಕಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಕುಂಬಾರವಾಡದಲ್ಲಿ ವಿವಿಧ ಜಾತಿ-ಧರ್ಮಗಳ ಸಮುದಾಯಗಳಿಗೆ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಂತಹ ಕಟ್ಟಡಗಳಿದ್ದರೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸಮುದಾಯ ಭವನದ ಸೌಲಭ್ಯ ಇಲ್ಲ. ಹೀಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಕುಂಬಾರವಾಡದ ಸರ್ವೇ ನಂ. 51/1ರ 25 ಎಕರೆ ಸರ್ಕಾರಿ ಜಮೀನಿನಲ್ಲಿ 75×80 ಅಡಿ ಅಳತೆಯ ಖಾಲಿ ಜಾಗವಿದ್ದು, ಕಳೆದ 25 ವರ್ಷಗಳಿಂದ ಇದೇ ಸ್ಥಳದಲ್ಲಿ ಅಂಬೇಡ್ಕರ್ ಜಯಂತಿ, ಅಶೋಕ ದಶಮಿ, ಬುದ್ಧ ಪೂರ್ಣಿಮೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಜಾಗವನ್ನು ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡಿ, ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ 1 ಕೋಟಿ ರೂ. ಅನುದಾನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಮನವಿಗೆ ಸ್ಪಂದಿಸಿದ ಸಚಿವ ಈಶ್ವರ್ ಖಂಡ್ರೆ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂಬೇಡ್ಕರ್ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಲಕ್ಷ್ಮೀ, ರಮಾಬಾಯಿ, ಸೊಲೋಚನಾ, ಗಂಗಮ್ಮ, ಜ್ಯೋತಿ, ಲಕ್ಷ್ಮೀ ಕಳೆಕಾರ, ಶೋಭಾ, ಕಾಶಿಬಾಯಿ ಕಾಂಬ್ಳೆ, ಅಂಬವ್ವ, ಸುಮಿತ್ರಾ, ಅಂಬಿಕಾ, ನಾಗಮ್ಮ, ಶಕುಂತಲಾ, ರುಕ್ಮಿಣಿ, ಸರಸ್ವತಿ, ಪಂಚಶೀಲ, ಪ್ರಭಾವತಿ, ಸುಭಾಷ್ ವರ್ಮಾ, ಮಲ್ಲಿಕಾರ್ಜುನ ಮೊಳಕೆರೆ, ಗೌತಮ ಭೋಸ್ಲೆ, ತುಕಾರಾಮ ಕಡೆಮನಿ, ಶಿವಲಿಂಗಪ್ಪ ಕಡೆಮನಿ, ಸಿದ್ದಪ್ಪ ಕಾಂಬ್ಳೆ, ಸಾಯಿನಾಥ ಕಳೆಕಾರ, ಸದಾನಂದ ಕಳೆಕಾರ, ಸಿದ್ದಾರ್ಥ ಕಾಂಬ್ಳೆ, ಆನಂದ ಕಡೆಮನಿ, ನರಸಿಂಗ್ ನಾಗೂರೆ, ಭರತ್ ಕಾಂಬ್ಳೆ, ದಿಗಂಬರ ಹಾಗೂ ಸಂತೋಷ್ ಬೆನ್ನಕನಳ್ಳಿಕರ್ ಉಪಸ್ಥಿತರಿದ್ದರು.






