ಬೀದರ್ | ಹಳೆಯ ಬಸ್ ನಿಲ್ದಾಣದಿಂದ ಹೊಸ ಜಿಲ್ಲಾಧಿಕಾರಿ ಕಚೇರಿ ವರೆಗೆ ಬಸ್ ಸೌಲಭ್ಯ ಕಲ್ಪಿಸಲು ಮನವಿ

ಬೀದರ್: ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಹಳೆ ಬಸ್ ನಿಲ್ದಾಣದಿಂದ ಹೊಸ ಜಿಲ್ಲಾಧಿಕಾರಿ ಕಚೇರಿವರೆಗೆ ಸಿಟಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಭೀಮ್ ಟೈಗರ್ ಸೇನಾ ಹಾಗೂ ಭಾರತೀಯ ಜೈಭೀಮ್ ದಳದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಪ್ರತಿದಿನ ಹಳ್ಳಿಗಳಿಂದ ಬರುವ ಸಾರ್ವಜನಿಕರು ಹೊಸ ಕಚೇರಿಯ ಸ್ಥಳದ ಬಗ್ಗೆ ತಿಳಿಯದೆ ಪರದಾಡುತ್ತಿದ್ದಾರೆ. ಹಳೆಯ ಕಚೇರಿ ಹತ್ತಿರ ಸೂಚನಾ ಫಲಕ (ಬೋರ್ಡ್) ಅಳವಡಿಸದ ಕಾರಣ ಜನರಿಗೆ ಸ್ಥಳಾಂತರಗೊಂಡ ಕಚೇರಿಯ ಮಾಹಿತಿ ಸಿಗುತ್ತಿಲ್ಲ ಮನವಿ ಪತ್ರದಲ್ಲಿ ಎಂದು ತಿಳಿಸಲಾಗಿದೆ.
ಸಾರ್ವಜನಿಕರ ಸೌಕರ್ಯಕ್ಕಾಗಿ ಬೆಳಿಗ್ಗೆ 8 ಗಂಟೆಯಿಂದ ಕಚೇರಿ ಸಮಯದವರೆಗೆ ಹಳೆ ಬಸ್ ನಿಲ್ದಾಣದಿಂದ ಹೊಸ ಕಚೇರಿವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಹೊಸ ಕಚೇರಿಯ ಸ್ಥಳದ ಮಾಹಿತಿ ಹೊಂದಿದ ದೊಡ್ಡ ಗಾತ್ರದ ಬ್ಯಾನರ್ ಅಳವಡಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಜೈಭೀಮ್ ದಳದ ಜಿಲ್ಲಾಧ್ಯಕ್ಷ ಅಂಬೇಡ್ಕರ್ ಸಾಗರ್, ಭೀಮ್ ಟೈಗರ್ ಸೇನಾದ ಜಿಲ್ಲಾಧ್ಯಕ್ಷ ನರಸಿಂಗ್ ಎಂ. ಸಾಮ್ರಾಟ್, ಉಪಾಧ್ಯಕ್ಷ ತುಕಾರಾಮ್ ಎಸ್. ಬೌದ್ಧೆ ಹಾಗೂ ರಾಜಕುಮಾರ್ ಸೈನ್ಯ ಉಪಸ್ಥಿತರಿದ್ದರು.







