ಬೀದರ್ | ಸಿಂಧನಕೇರಾ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಲು ಮನವಿ

ಬೀದರ್ : ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದಲ್ಲಿನ ತಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಇಂದು ಗ್ರಾಮದ ತಾಜ್ಯ ವಿಲೇವಾರಿ ಘಟಕವನ್ನು ಪರಿಶೀಲನೆ ಮಾಡಲು ತಹಶೀಲ್ದಾರ್ ಅಂಜುಂ ತಬಸುಮ್ ಅವರು ಪುರಸಭೆ ಅಧಿಕಾರಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಜೊತೆಗೆ ಬಂದಾಗ, ತಹಶೀಲ್ದಾರ್ ಅವರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಹುಮನಾಬಾದ್ ಪಟ್ಟಣದ ತ್ಯಾಜ್ಯ ಕಸವನ್ನು ಸಿಂಧನಕೇರಾ ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತಂದು ಬಿಸಾಡಲಾಗುತ್ತಿದೆ. ಇದರಿಂದಾಗಿ ಗ್ರಾಮದ ಜನರಲ್ಲಿ ವಿಚಿತ್ರ ರೋಗಗಳು ಕಂಡು ಬರುತ್ತಿವೆ ಎಂದು ಆರೋಪಿಸಲಾಗಿದೆ.
ಈ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಹಾಗೆಯೇ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಅವರ ಮುಖಾಂತರವೂ ಕೂಡ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾಲ್ಲೂಕು ಪಂಚಾಯತಿಯ ಕೆಡಿಪಿ ಸಭೆಯಲ್ಲಿ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹಾಗೂ ಶಾಸಕರಿಗೆ ಈ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಲು ಮನವಿ ಮಾಡಿದ್ದೇವೆ. ಅದೇ ರೀತಿ ಸಾಮಾಜಿಕ ಜಾಲತಾಣಗಳ ಮುಖಾಂತರ ರಾಜ್ಯ ಸರಕಾರದ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಲಾಗಿದೆ.
ಕೆಲ ದಿನಗಳ ಹಿಂದೆ ತ್ಯಾಜ್ಯ ವಿಲೇವಾರಿ ಘಟಕದ ಎದುರುಗಡೆ ಗ್ರಾಮಸ್ಥರೆಲ್ಲ ಸೇರಿ ಇದರ ವಿರುದ್ಧ ಧರಣಿ ಸತ್ಯಾಗ್ರಹ ಮಾಡಿದ್ದೇವೆ. ಆ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿ ಮೀನಾಕುಮಾರಿ ಹಾಗೂ ಗ್ರೇಡ್ 2 ತಹಶೀಲ್ದಾರ್ ಗೀತಾ ಅವರು ಸ್ಥಳಕ್ಕೆ ಬಂದು, ನಮ್ಮ ಮನವಿ ಪತ್ರವನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ರವಾನಿಸುತ್ತವೆ ಎಂದು ಭರವಸೆ ನೀಡಿದಾಗ ಆ ಹೋರಾಟ ಕೈ ಬಿಟ್ಟಿದ್ದೇವೆ. ಆದರೂ ನಮ್ಮ ಸಮಸ್ಯೆ ಪರಿಹಾರ ಆಗಲಿಲ್ಲ. ಸಿಂಧನಕೇರಾ ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಯುವರಾಜ್ ಎಸ್ ಐಹೊಳ್ಳಿ, ಗುರು ಪಾಟೀಲ್, ಶೈಖ್ ಫಿರ್ದೋಸ್, ಸಂಗಮೇಶ್ ಶಿವಪೂಜಿ, ಗಣಪತಿ ಪರಸೆಕರ್, ಸರದಾರ್, ಮೊಹಮ್ಮದ್, ಮಲ್ಲೇಶ್ ಮಿತ್ರ ಹಾಗೂ ಬಸವರಾಜ್ ತೇಲಂಗ್ ಸೇರಿದಂತೆ ಇತರರು ಇದ್ದರು.







