Bidar | ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮೀಸಲಿಡಿ: ಮಾರುತಿ ಬೌದ್ಧೆ

ಬೀದರ್: ನಗರದ ಕುಂಬರವಾಡ ಬಡಾವಣೆಯ ಸರ್ವೇ ನಂ.51/1ರಲ್ಲಿ ಇರುವ ಖಾಲಿ ಜಾಗದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮೀಸಲಿಡಬೇಕು. ಇಲ್ಲವಾದಲ್ಲಿ ಬಡಾವಣೆಯ ಜನರು ನಗರದ ಅಂಬೇಡ್ಕರ್ ವೃತ್ತದಲ್ಲಿಯೇ ಮನೆ ಮಾಡಿಕೊಂಡು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಂ.51/1ರಲ್ಲಿ ಸುಮಾರು 25 ಎಕರೆ ಗೋಮಾಳ ಜಾಗವಿದ್ದು, ಈ ಪ್ರದೇಶದಲ್ಲಿ ಮಂದಿರ, ಚರ್ಚ್, ಮನೆಗಳು ಹಾಗೂ ವಿವಿಧ ಸಮುದಾಯಗಳ ಸಮುದಾಯ ಭವನಗಳು ನಿರ್ಮಾಣವಾಗಿವೆ. ಆದರೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡಲಾಗಿಲ್ಲ ಎಂದು ಹೇಳಿದರು.
ಖಾಲಿ ಇರುವ ಜಾಗದಲ್ಲಿ ಹಲವು ವರ್ಷಗಳಿಂದ ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮೆ, ಮಹಾಪರಿನಿರ್ವಾಣ ದಿನ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೇ 18ರಂದು ಜಾಗದಲ್ಲಿದ್ದ ನೀಲಿ ಧ್ವಜವನ್ನು ಜೋಷಪ್ಪ ಕೊಡೇಕರ್ ಹಾಗೂ ಅವರ ಪತ್ನಿ ಶೋಭಾರಾಣಿ ಅವರು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಗಾಂಧಿಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯಂತೆ ಸಮಸ್ಯೆ ಬಗೆಹರಿಯುವವರೆಗೆ ಯಾರೂ ಜಾಗಕ್ಕೆ ತೆರಳಬಾರದು ಎಂಬ ನಿರ್ದೇಶನವಿತ್ತು. ಆದರೆ ಅದೇ ರಾತ್ರಿ ಜೋಷಪ್ಪ ಹಾಗೂ ಶೋಭಾರಾಣಿ ಅವರು ಪೊಲೀಸರ ಎದುರೇ ಕ್ರಿಶ್ಚಿಯನ್ ಧ್ವಜ ಹಾರಿಸಿದ್ದಾರೆ ಎಂದು ಆರೋಪಿಸಿದರು. ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಮನೋಜ್ ಅವರ ಪಾತ್ರದ ಬಗ್ಗೆಯೂ ಅನುಮಾನವಿದ್ದು, ಅವರನ್ನು ಅಮಾನತುಗೊಳಿಸಬೇಕು. ಪ್ರಕರಣ ದಾಖಲಿಸದ ಗಾಂಧಿಗಂಜ್ ಠಾಣೆಯ ಇನ್ಸ್‌ಪೆಕ್ಟರ್ ಆನಂದ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಕುಂಬರವಾಡದಲ್ಲಿ ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ವೇ ನಂ.51/1ರಲ್ಲಿ ಸುಮಾರು 75ರಿಂದ 80 ಅಡಿ ವಿಸ್ತೀರ್ಣದ ಜಾಗವನ್ನು ಅಧಿಕೃತವಾಗಿ ಅಂಬೇಡ್ಕರ್ ಸಮುದಾಯ ಭವನಕ್ಕಾಗಿ ಮೀಸಲಿಡಬೇಕು. ನೀಲಿ ಧ್ವಜ ತೆರವುಗೊಳಿಸಿದ ಆರೋಪ ಎದುರಿಸುತ್ತಿರುವ ಅಂಗನವಾಡಿ ಶಿಕ್ಷಕಿ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆ.15ರಂದು ಧ್ವಜ ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ಕುಂಬರವಾಡದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಪರ್ಯಾಯ ಸರ್ಕಾರಿ ಜಾಗ ಗುರುತಿಸಿ, ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಶೀಘ್ರ ಮಂಜೂರು ಮಾಡಬೇಕು ಎಂದು ಮಾರುತಿ ಬೌದ್ಧೆ ಆಗ್ರಹಿಸಿದರು.
ಈ ವೇಳೆ ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಾಬುರಾವ್ ಪಾಸ್ವಾನ್ ಮಾತನಾಡಿದರು. ಈ ಸಂದರ್ಭದಲ್ಲಿ ಶುದ್ಧೋಧನ ಮಹಾಮಾಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಕಡಿಮನಿ, ದಲಿತ ಮುಖಂಡರಾದ ಸುಭಾಷ್ ವರ್ಮಾ, ವಿಠಲದಾಸ್ ಪ್ಯಾಗೆ, ರಾಜಕುಮಾರ್ ಮೂಲಭಾರತಿ, ಅಂಬದಾಸ್ ಗಾಯಕವಾಡ್, ಸುನೀಲ್ ಸಂಗಮ್, ಶ್ರೀಪತರಾವ್ ದೀನೆ, ಶಿವಕುಮಾರ್ ನಿಲಿಕಟ್ಟೆ, ಸುಬ್ಬಣ್ಣ ಕರಕನಳ್ಳಿ ಹಾಗೂ ಮಲ್ಲಿಕಾರ್ಜುನ್ ಮೋಳಕೆರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.






