ಬೀದರ್ | ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ; ರೈತ ಸಂಘ ಮನವಿ

ಬೀದರ್ : ಜಿಲ್ಲೆಯ ರೈತರು ಪ್ರತಿ ವರ್ಷ ಹಲವಾರು ಸಮಸ್ಯೆಗಳಿಗೆ ಸಿಲುಕಿ ನರಳಾಡುತ್ತಿದ್ದಾರೆ. ಆ ಸಮಸ್ಯೆಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಸ್ಪಂದಿಸಿ, ಅತೀ ಶೀಘ್ರದಲ್ಲಿ ಬಗೆಹರಿಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮನವಿ ಮಾಡಿದೆ.
ಜಿಲ್ಲಾ ಸಹಕಾರ ಬ್ಯಾಂಕಿನಿಂದ (ಡಿಸಿಸಿ) ರೈತರಿಗೆ ಸಾಲ ಸಿಗುತ್ತಿಲ್ಲ. ಕೂಡಲೇ ರೈತರಿಗೆ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಬೆಳೆ ವಿಮೆ ಮಾಡಿಸಿದ ರೈತರಿಗೆ ಇಲ್ಲಿಯವರೆಗೆ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮೆ ಆಗಿರುವುದಿಲ್ಲ. ಅದನ್ನು ಶೀಘ್ರದಲ್ಲಿ ಜಮೆ ಮಾಡಿಬೇಕು ಎಂದು ಒತ್ತಾಯಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಮಂಜಿನಿಂದಾಗಿ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಎಕರೆಗೆ 25 ಸಾವಿರ ರೂ. ನಂತೆ ಅತೀ ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ನೀಡಬೇಕು. ತೊಗರಿ ಖರೀದಿ ಕೇಂದ್ರದಲ್ಲಿ ಖಾಲಿ ಚೀಲಗಳು ಇರುವುದಿಲ್ಲ ಎಂದು ನೆಪ ಹೇಳಿ, ತೊಗರಿ ಖರೀದಿಸುತ್ತಿಲ್ಲ. ಈ ಸಮಸ್ಯೆ ಶೀಘ್ರದಲ್ಲಿ ಬಗೆಹರಿಸಬೇಕು. ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಸರಬರಾಜು ಮಾಡಿ, 3 ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ಯಾವ ರೈತರ ಖಾತೆಗೆ ಕೂಡ ಬಿಲ್ಲು ಜಮೆ ಆಗಿರುವುದಿಲ್ಲ. ಅದನ್ನು ಶೀಘ್ರದಲ್ಲಿ ಎಲ್ಲಾ ರೈತರ ಖಾತೆಗೆ ಜಮೆ ಮಾಡಬೇಕು ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 2,700 ರೂ. ನಿಗದಿಪಡಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಕಾರ್ಖಾನೆಯವರು ನಿಗದಿಪಡಿಸಿದ ಹಣ ರೈತರಿಗೆ ನೀಡಲಿಲ್ಲ. ಆದಕಾರಣ ಅತೀ ಶೀಘ್ರದಲ್ಲಿ ಸಚಿವರು ಬೆಲೆ ನಿಗದಿ ಮಾಡಿದಂತೆ ಹಣ ರೈತರ ಖಾತೆಗೆ ಜಮೆ ಮಾಡಿಸಬೇಕು ಎಂದಿದ್ದಾರೆ.
ಈ ಮೇಲಿನ ಎಲ್ಲ ಬೇಡಿಕೆಗಳು ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ್ ಬಿರಾದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ಶಂಕ್ರೆಪ್ಪಾ ಪಾರಾ, ಪ್ರವೀಣ್ ಕುಲಕರ್ಣಿ, ಬಾಬುರಾವ್ ಜೋಳದಾಬಕಾ, ಮಲ್ಲಿಕಾರ್ಜುನ್ ಚಕ್ಕಿ, ರಾಜಕುಮಾರ್ ಪಾಟೀಲ್, ನಾಗಯ್ಯಾ ಸ್ವಾಮಿ, ರಮೇಶ್ ಮೋರ್ಗೆ, ಮೋಹನರಾವ್ ಮರಖಲ್, ಧೂಳಪ್ಪಾ ಆಣದೂರ್, ವಿಶ್ವನಾಥ್ ಧರಣೆ ಹಾಗೂ ಪ್ರಕಾಶ್ ಬಾವಗೆ ಉಪಸ್ಥಿತರಿದ್ದರು.







