ಬೀದರ್ | ಪಿಎಂ ಕಿಸಾನ್ ಎಂಬ ಎಪಿಕೆ ಫೈಲ್ ನಿಂದ 4 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ನಿವೃತ್ತ ನೌಕರ : ಪ್ರಕರಣ ದಾಖಲು

ಬೀದರ್ : ಪಿಎಂ ಕಿಸಾನ್ ನ್ಯೂ ರಿಜಿಸ್ಟ್ರೇಷನ್ ಎಪಿಕೆ (PM KISHAN NEW REGISTRATION APK) ಎಂಬ ಫೈಲ್ ನಿಂದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದ ನೌಕರರೊಬ್ಬರು 4 ಲಕ್ಷ 29 ಸಾವಿರ ರೂ. ಕ್ಕಿಂತಲೂ ಅಧಿಕ ಹಣ ಕಳೆದುಕೊಂಡಿದ್ದು, ಮಂಗಳವಾರ ಪ್ರಕರಣ ದಾಖಲಾಗಿದೆ.
ನಗರದ ವಿದ್ಯಾನಗರ ಕಾಲೋನಿಯ ಶಿವಕಾಂತ್ ಎನ್ನುವವರು ಹಣ ಕಳೆದುಕೊಂಡ ನಿವೃತ್ತ ನೌಕರರಾಗಿದ್ದಾರೆ. 2023ರಲ್ಲಿ ನಿವೃತ್ತನಾಗಿದ್ದು, ನನ್ನ ಖಾತೆಗೆ ಪಿಂಚಣಿ ಹಣ ಜಮೆಯಾಗಿತ್ತು. ನನ್ನ ಖಾತೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ನೆಟ್ವರ್ಕ್ ಸಮಸ್ಯೆ ಇರುವ ಕಾರಣ ಸಿಮ್ ಬದಲಾಯಿಸಿದ್ದೇನೆ. ಕೆಲ ದಿನಗಳು ನಾನು ನನ್ನ ಖಾತೆಯಲ್ಲಿರುವ ಹಣದ ಬಗ್ಗೆ ಪರಿಶೀಲನೆ ಮಾಡಲಿಲ್ಲ. ಅ. 3 ರಂದು ಹಣ ತೆಗೆಯಲು ಬ್ಯಾಂಕಿಗೆ ಹೋದಾಗ ಪಿಎಂ ಕಿಸಾನ್ ನ್ಯೂ ರಿಜಿಸ್ಟ್ರೇಷನ್ ಎಪಿಕೆ (PM KISHAN NEW REGISTRATION APK) ಎಂಬ ಫೈಲ್ ನಿಂದ ಅಪರಿಚಿತರು ಹಣ ವರ್ಗಾಯಿಸಿಕೊಂಡಿರುವುದು ಪತ್ತೆಯಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬೀದರ್ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.





