Bidar | ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

ಬೀದರ್ : 2025-26ನೇ ಸಾಲಿನ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರಸ್ತೆ ದುರಸ್ತಿ ಮತ್ತು ಒಗ್ಗೂಡಿಸುವಿಕೆ ಕಾಮಗಾರಿಗಳನ್ನು ಕೈಗೊಳ್ಳದೆ ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬುಧವಾರ ಸಾಂಕೇತಿಕ ಧರಣಿ ನಡೆಸಿ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಬೀದರ್ ತಾಲೂಕಿನ ಅಲಿಯಾಬಾದ್–ಜನವಾಡ, ಅಲಿಯಂಬರ್–ಯರನಳ್ಳಿ ರಸ್ತೆಗಳು, ಔರಾದ್(ಬಿ) ತಾಲೂಕಿನ ಸುಂಕನಾಳ ಕ್ರಾಸ್–ಸುಂಕನಾಳ ಗ್ರಾಮ, ನಾಗೂರ್ ಕ್ರಾಸ್–ಚಂದರ್ ಮಹಾರಾಜ ತಾಂಡಾ ರಸ್ತೆ ಸೇರಿದಂತೆ ಹಲವು ರಸ್ತೆ ಕಾಮಗಾರಿಗಳು ನಡೆದಿಲ್ಲ ಎಂದು ಆರೋಪಿಸಲಾಗಿದೆ.
ಇದೇ ರೀತಿ ಗೌಡಗಾಂವ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುರಸ್ತಿ ಹಾಗೂ ಕಮಲನಗರ ತಾಲೂಕಿನ ಡೋಣಗಾಂವ್–ರಂಡ್ಯಾಳ್ ನಡುವಿನ ರಸ್ತೆ ದುರಸ್ತಿ ಕಾಮಗಾರಿಗಳನ್ನೂ ಕೈಗೊಳ್ಳದೆ ಅನುದಾನ ದುರುಪಯೋಗಪಡಿಸಿಕೊಂಡಿರುವುದಾಗಿ ದೂರಲಾಗಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಾಜಿರಾವ್ ಡೋಣೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕಲೀಮೊದ್ದಿನ್, ಸುನೀಲ್ ಚಿಲ್ಲರ್ಗೆ ಹಾಗೂ ಗುತ್ತಿಗೆ ಆಧಾರಿತ ಕಿರಿಯ ಅಭಿಯಂತರ ಕೀರಣ್ ರಾಠೋಡ್ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಮಿತಿ ಆಗ್ರಹಿಸಿದೆ.
ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ್ ಹೊಸಮನಿ, ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಾಸ್ವಾನ್, ನಗರ ಘಟಕದ ಅಧ್ಯಕ್ಷ ವಿನೋದ್ ಶಿಂಧೆ, ಸಂಜುಕುಮಾರ್ ವಲ್ಲೆಪೂರೆ, ಯುವ ಮುಖಂಡ ಬಿ. ವೀರೇಶ್ ಕೋರೆ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಉಮೇಶ್ ಮುಗನೂರೆ, ಸಂತೋಷ್ ಸಂಗಮ, ಬಸವರಾಜ್ ಭಾವಿದೊಡ್ಡಿ, ಗೌತಮ್ ಮುತ್ತಂಗಿಕರ್ ಹಾಗೂ ಶಿವುಕುಮಾರ್ ಗುನ್ನಳ್ಳಿಕರ್ ಉಪಸ್ಥಿತರಿದ್ದರು.






