Bidar | ರೊಬೊಟಿಕ್ ತಂತ್ರಜ್ಞಾನದಿಂದ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಹೆಚ್ಚು ನಿಖರ: ಡಾ.ವಿನಯಕುಮಾರ್ ಹಂಪಣ್ಣ

ಬೀದರ್: ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ರೊಬೊಟಿಕ್ ತಂತ್ರಜ್ಞಾನದ ಬಳಕೆಯಿಂದ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ನಡೆಸಲು ಸಾಧ್ಯವಾಗಿದ್ದು, ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ನೆರವಾಗುತ್ತಿದೆ ಎಂದು ಸಿಕಂದರಾಬಾದ್ನ ಯಶೋದಾ ಆಸ್ಪತ್ರೆಯ ಹಿರಿಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿನಯಕುಮಾರ್ ಹಂಪಣ್ಣ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಣಕಾಲು, ಸೊಂಟ ಹಾಗೂ ಭುಜದ ಕೀಲುಗಳ ಸವೆತ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ಮೂಳೆಯ ರಚನೆ ಹಾಗೂ ಅಳತೆಗೆ ಅನುಗುಣವಾಗಿ ಕೃತಕ ಕೀಲನ್ನು ನಿಖರವಾಗಿ ಅಳವಡಿಸಲು ಸಾಧ್ಯವಾಗುತ್ತದೆ ಎಂದರು.
ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ರೊಬೊಟಿಕ್ ತಂತ್ರಜ್ಞಾನವು ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸುತ್ತದೆ. ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗಲು ಹಾಗೂ ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ಇದು ನೆರವಾಗಬಹುದು. ಇದರಿಂದ ರೋಗಿಗಳು ಮೆಟ್ಟಿಲು ಹತ್ತುವುದು, ನಡೆಯುವುದು ಸೇರಿದಂತೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ಶೀಘ್ರವಾಗಿ ಮರಳಲು ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಬೀದರ್ ಜಿಲ್ಲೆಯ ರೋಗಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಯಶೋದಾ ಆಸ್ಪತ್ರೆಯ ತಜ್ಞ ವೈದ್ಯರು ಸ್ಥಳೀಯ ವೈದ್ಯರ ಸಹಯೋಗದೊಂದಿಗೆ ಪ್ರತಿ ತಿಂಗಳು ನಗರಕ್ಕೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೀದರ್ನಲ್ಲಿ ಯಶೋದಾ ಆಸ್ಪತ್ರೆಯ ಹೊರರೋಗಿ ಚಿಕಿತ್ಸಾ ಕೇಂದ್ರ (ಔಟ್ರೀಚ್ ಕ್ಲಿನಿಕ್) ಆರಂಭಿಸುವ ಯೋಜನೆಯಿದೆ. ಈ ಕೇಂದ್ರ ಆರಂಭವಾದರೆ ಜಿಲ್ಲೆಯ ರೋಗಿಗಳು ತಜ್ಞ ವೈದ್ಯರ ಸಲಹೆ ಹಾಗೂ ಪ್ರಾಥಮಿಕ ತಪಾಸಣೆಗಾಗಿ ಹೈದರಾಬಾದ್ಗೆ ತೆರಳುವ ಅಗತ್ಯ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಶೋದಾ ಆಸ್ಪತ್ರೆಯ ಉಪ ವ್ಯವಸ್ಥಾಪಕ ಸಿ.ಎಚ್. ಸತೀಶ್ ಹಾಗೂ ಬಿ. ಶ್ರೀನಿವಾಸ್ ಉಪಸ್ಥಿತರಿದ್ದರು.






