Bidar | ಎಸ್. ಜಾನಕಿ ಅವರ ಅಗಲಿಕೆ ಕನ್ನಡ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ: ವೀರಭದ್ರಪ್ಪ ಉಪ್ಪಿನ

ಬೀದರ್ : ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಅಗಲಿಕೆಯಿಂದ ಕನ್ನಡ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ ಹೇಳಿದರು.
ನಗರದ ಬರೀದ್ ಶಾಹಿ ಉದ್ಯಾನವನದಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ಎಸ್. ಜಾನಕಿ ಅವರು ಅಹಂಕಾರದಿಂದ ದೂರವಿದ್ದು, ಸರಳತೆಯ ಸಾಕಾರಮೂರ್ತಿಯಾಗಿದ್ದರು ಎಂದು ಸ್ಮರಿಸಿದರು.
ಕನ್ನಡದ ಮೇರುನಟ ಡಾ. ರಾಜ್‌ಕುಮಾರ್, ಹಿರಿಯ ಹಿನ್ನೆಲೆ ಗಾಯಕರಾದ ಪಿ.ಬಿ. ಶ್ರೀನಿವಾಸ್ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಪ್ರೀತಿಯಿಂದ “ಜಾನಕಮ್ಮ” ಎಂದು ಕರೆಯುತ್ತಿದ್ದು, ಅದು ಅವರಿಗೆ ಇದ್ದ ಅಪಾರ ಗೌರವದ ಪ್ರತೀಕವಾಗಿತ್ತು ಎಂದು ಹೇಳಿದರು.
ಜೀವನದಲ್ಲಿ ಪತಿ ಹಾಗೂ ಪುತ್ರನನ್ನು ಕಳೆದುಕೊಂಡ ದುಃಖದ ನಡುವೆಯೂ ಸಂಗೀತಾಭಿಮಾನಿಗಳಿಗೆ ಅನೇಕ ಅಮರ ಗೀತೆಗಳನ್ನು ನೀಡಿದ ಜಾನಕಿ ಅವರ ಬದುಕು ಸ್ಫೂರ್ತಿದಾಯಕವಾಗಿದೆ ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೆ ಮಾತನಾಡಿ, ಆಂಧ್ರಪ್ರದೇಶ ಮೂಲದವರಾದ ಎಸ್. ಜಾನಕಿ ಅವರಿಗೆ ಮೈಸೂರಿನ ಮೇಲೆ ವಿಶೇಷ ಅಭಿಮಾನವಿದ್ದು, ತಮ್ಮ ಅಂತಿಮ ದಿನಗಳನ್ನು ಅಲ್ಲಿಯೇ ಕಳೆಯಬೇಕು ಹಾಗೂ ಅಂತ್ಯಸಂಸ್ಕಾರವೂ ಮೈಸೂರಿನಲ್ಲಿಯೇ ನಡೆಯಬೇಕು ಎಂಬ ಅವರ ಆಶಯ ಈಡೇರಿದೆ ಎಂದು ಹೇಳಿದರು.
ನಿವೃತ್ತ ಮುಖ್ಯಗುರು ನಿಜಲಿಂಗಪ್ಪ ತಗಾರೆ ಸ್ವಾಗತಿಸಿ ಮಾತನಾಡಿ, ಎಸ್. ಜಾನಕಿ ಅವರ ನಿಧನದಿಂದ ಇಂಪಾದ ಗಾಯನದ ಒಂದು ಸುವರ್ಣಯುಗವೇ ಅಂತ್ಯಗೊಂಡಂತಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೂಜಾ, ಲಕ್ಷ್ಮಿ, ಶ್ರಾವಣಿ, ಅಶ್ವಿನಿ, ಮೋಹಸೀನ್, ಆಮೀರ್, ಬಂಡೆಪ್ಪ ಸೇರಿದಂತೆ ಅನೇಕ ಯೋಗ ಸಾಧಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಹಿರಿಯ ಪ್ರಗತಿಪರ ರೈತ ಮಲ್ಲಿಕಾರ್ಜುನ್ ಪಾಟೀಲ್ ಅವರು ವಂದಿಸಿದರು.






