Bidar | ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಿಎಂಗೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮನವಿ

ಬೀದರ್: ರೈತರು ಹಾಗೂ ಕೃಷಿ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಹವಾಮಾನ ಬದಲಾವಣೆ ಹಾಗೂ ಎಲ್‌ನಿನೋ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ಬಿತ್ತನೆ ಮಾಡಿದ ಹಾಗೂ ಬಿತ್ತನೆ ಮಾಡಲು ಸಾಧ್ಯವಾಗದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ರೈತರಿಗೆ ₹50 ಸಾವಿರ ಧನಸಹಾಯ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ರಸಗೊಬ್ಬರ ಖರೀದಿಸುವ ವೇಳೆ ಅನಗತ್ಯ ಗೊಬ್ಬರ ಮತ್ತು ಇತರ ವಸ್ತುಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುವುದನ್ನು ತಡೆಯಬೇಕು. 60 ವರ್ಷಗಳ ಕಾಲ ದುಡಿಯುವ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ₹10 ಸಾವಿರ ಗೌರವಧನ ನೀಡಬೇಕು. ಮತದಾರರಿಗೆ ಜನಪ್ರತಿನಿಧಿಗಳನ್ನು ವಾಪಸ್ ಕರೆಯುವ ಅಧಿಕಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಳೆ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಎಂಎನ್‌ಆರ್‌ಇಜಿಎಸ್) ಕಾಮಗಾರಿಗಳನ್ನು ತಕ್ಷಣ ಆರಂಭಿಸಿ, ಹೊಲಗಳಿಗೆ ರಸ್ತೆ ನಿರ್ಮಾಣ ಹಾಗೂ ಕೃಷಿ ಕಾಮಗಾರಿಗಳಿಗೆ ಕೂಲಿ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಲಾಗಿದೆ.
ಸರ್ಕಾರಿ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿ, ಪ್ರತಿ ಕ್ವಿಂಟಲ್ ಕಬ್ಬಿಗೆ ₹500 ಬೆಲೆ ನಿಗದಿಪಡಿಸಬೇಕು. ಬೆಂಗಳೂರು ದಕ್ಷಿಣದ ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ ರೈತರು ಹಾಗೂ ರೈತ ಮಹಿಳೆಯರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ವಜಾಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಭಾಲ್ಕೇಶ್ವರ್ ಸಹಕಾರ ಸಕ್ಕರೆ ಕಾರ್ಖಾನೆ (ಗೌರಿ ಶುಗರ್ ಫ್ಯಾಕ್ಟರಿ) ರೈತರಿಗೆ ಬಾಕಿ ಇರುವ ಕಬ್ಬಿನ ಹಣವನ್ನು ತಕ್ಷಣ ಪಾವತಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳು ಸಾಲ ವಸೂಲಾತಿಗೆ ನೀಡುತ್ತಿರುವ ನೋಟಿಸ್‌ಗಳನ್ನು ಸ್ಥಗಿತಗೊಳಿಸಬೇಕು. ತೋಟದ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬಚಾವತ್ ಆಯೋಗದ ಶಿಫಾರಸಿನಂತೆ ಬೀದರ್ ಜಿಲ್ಲೆಗೆ ಗೋದಾವರಿ ಜಲಾನಯನ ಪ್ರದೇಶದಿಂದ ಬರಬೇಕಿರುವ ಉಳಿದ 12 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಿವರಾಯ್ ಮುದಾಳೆ, ಎಸ್‌ಕೆಎಂ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ, ರಾಜ್ಯ ಮಂಡಳಿಯ ಆಹ್ವಾನಿತ ವೀರಾರೆಡ್ಡಿ ಪಾಟೀಲ್, ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ರೈತ ಮುಖಂಡ ಶಿವರಾಜ್ ಪಾಟೀಲ್ ಅತಿವಾಳ್, ತಾಲೂಕಾಧ್ಯಕ್ಷ ಖಮರ್ ಪಟೇಲ್, ತಾಲೂಕು ಉಪಾಧ್ಯಕ್ಷ ಬಸವರಾಜ್ ಅಷ್ಟೂರ್, ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ಎಂ.ಡಿ ಶಫಾಯತ್ ಅಲಿ, ಜೈಶೀಲಕುಮಾರ್, ಭಾವುರಾವ್ ನೆಳವಾಡೆ, ಸರ್ವೋದಯ ಪಕ್ಷದ ಜಿಲ್ಲಾಧ್ಯಕ್ಷ ಕೋಂಡಿಬಾರಾವ್ ಪಾಂಡ್ರೆ ಹಾಗೂ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಶೀಲಾ ಸಾಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






