ಬೀದರ್ | ಜು.14ರಂದು ʼಕನ್ನಡ ಶಾಲೆ ಉಳಿಸಿ, ಕರ್ನಾಟಕ ಉಳಿಸಿʼ ಹೋರಾಟ ಸತ್ಯಾಗ್ರಹ : ರೇವಣಸಿದ್ದಪ್ಪ

ಬೀದರ್ : ಜು.14 ರಂದು ರಾಜ್ಯಾದ್ಯಂತ ʼಕನ್ನಡ ಶಾಲೆಗಳು ಉಳಿಸಿ, ಕರ್ನಾಟಕ ಉಳಿಸಿʼ ಎಂಬ ಸಂಕಲ್ಪದೊಂದಿಗೆ ಹೋರಾಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಗೌರವಾಧ್ಯಕ್ಷ ಹಾಗೂ ಕನ್ನಡ ಸಂರಕ್ಷಣಾ ಸಮಿತಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಅವರು ಹೇಳಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಶೇ.70 ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಆದರೂ ರಾಜ್ಯ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಮಾಡುತ್ತಿದೆ. ಇದರಿಂದಾಗಿ ಕನ್ನಡಕ್ಕೆ ಕುತ್ತು ಬರುತ್ತಿದೆ. ಇನ್ನು 5 ವರ್ಷ ಹೀಗೆ ಮುಂದುವರೆದರೆ ಕನ್ನಡವೇ ಇಲ್ಲದಂತೆ ಆಗುತ್ತದೆ ಎಂದು ಆರೋಪಿಸಿದರು.
ಪ್ರತಿ ವರ್ಷ ನವೀಕರಣ ಹೆಸರಲ್ಲಿ ಖಾಸಗಿ ಶಾಲೆಗಳಿಗೆ ಶೋಷಣೆ ಮಾಡಲಾಗುತ್ತಿದೆ. ಬರೀ ಸರ್ಕಾರಿ ಶಾಲೆ ಹೆಚ್ಚಿಸಿದರೆ ಸಾಲದು, ಮೌಲ್ಯಯುತ ಶಿಕ್ಷಣ ನೀಡುವ ವ್ಯವಸ್ಥೆ ನಿರ್ಮಾಣ ಮಾಡಬೇಕು. ಬೆಂಗಳೂರಲ್ಲಿ ಕೇವಲ 1 ಕನ್ನಡ ಶಾಲೆ ಉಳಿದಿರುವುದು ದೊಡ್ಡ ದುರಂತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆರ್.ಟಿ.ಇ ಯೋಜನೆ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳು ಪ್ರವೇಶ ಪಡೆಯಲು ಅವಕಾಶ ಮಾಡಿಕೊಡಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡಬೇಕು. 371 (ಜೆ) ಕಾನೂನಡಿ ಸಿಗಬೇಕಾದ ಎಲ್ಲ ಸೌಲಭ್ಯಗಳು ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು. ಹಾಗೆಯೇ ಜಿಲ್ಲೆಯಲ್ಲಿರುವ ಎಲ್ಲ ಅನಧಿಕೃತ ಕೋಚಿಂಗ್ ಸೆಂಟರ್ ಗಳು ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಸಗಿ ಶಾಲಾ ಅಡಳಿತ ಮಂಡಳಿ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಗೀರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥ್ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮಾಣಿಕಪ್ಪ ಗೋರನಾಳೆ, ಬೀದರ್ ತಾಲೂಕಾಧ್ಯಕ್ಷ ಸಂದೀಪ್ ಶೇಟಕಾರ್, ಬೀದರ್ ದಕ್ಷಿಣ ವಿಭಾಗದ ಅಧ್ಯಕ್ಷ ಸಯ್ಯದ್ ಅಹಮ್ಮದ್ ಮುದ್ದೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವಶಂಕರ್ ಟೋಕರೆ ಸೇರಿದಂತೆ ಇತರರು ಇದ್ದರು.







