ಬೀದರ್‌ನ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗೆ 'ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ' ಪ್ರದಾನ

ಬೀದರ್ : ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿಯು ಬೀದರ್ ಮೂಲದ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗೆ ವಾರ್ಷಿಕ ʼಬಾಲ ವಿಕಾಸ ಅಕಾಡೆಮಿ ಪ್ರಶಸ್ತಿʼ ಪ್ರದಾನ ಮಾಡಿದೆ.
ಸುವರ್ಣ ವಿಧಾನಸೌಧದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಶಾಲೆ ತೊರೆದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ನಡೆಸಿದ ವಿಶೇಷ ಪ್ರಯತ್ನವನ್ನು ಗುರುತಿಸಿ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ಸುಮಾರು 15 ವರ್ಷಗಳಿಂದ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದೆ. ಪ್ರತಿ ವರ್ಷ ಸರಾಸರಿ 800 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಬೀದರ್‌ನ ಮುಖ್ಯ ಕ್ಯಾಂಪಸ್‌ನಲ್ಲಿ ವಿವಿಧ ಕೋರ್ಸ್ ಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಶಾಹೀನ್ ಶಿಕ್ಷಣ ಸಂಸ್ಥೆಯು ರಾಜ್ಯ ಸರಕಾರದ ಅಲ್ಪಸಂಖ್ಯಾತ ಇಲಾಖೆಯ ಸಹಯೋಗದೊಂದಿಗೆ ಕೋರ್ಸ್ ಅನ್ನು ನಡೆಸುತ್ತಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ್, ಇತರ ಪ್ರಶಸ್ತಿ ಪುರಸ್ಕೃತರು, ಅಧಿಕಾರಿಗಳು ಉಪಸ್ಥಿತರಿದ್ದರು.







