ಬೀದರ್ | ಶರಣೆ ಜಯದೇವಿ ತಾಯಿ ಲಿಗಾಡೆ ಅವರು ಕನ್ನಡ ತಾಯ್ನುಡಿನ ತಪಸ್ವಿನಿಯಾಗಿದ್ದರು : ಡಾ.ರಂಜನಾ ಪಾಟೀಲ್

ಬೀದರ್ : ಶರಣೆ ಜಯದೇವಿ ತಾಯಿ ಲಿಗಾಡೆ ಅವರು ಕನ್ನಡ ತಾಯ್ನುಡಿನ ತಪಸ್ವಿನಿಯಾಗಿದ್ದರು ಎಂದು ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರಂಜನಾ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಇಂದು ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ, ಜಯದೇವಿ ತಾಯಿ ಲಿಗಾಡೆ ಅವರ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿರುವ ಅವರು ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಸಮಾಜ ಸೇವೆಗೆ ತಮ್ಮ ಸಂಪೂರ್ಣ ಜೀವನ ಅರ್ಪಿಸಿಕೊಂಡಿದ್ದರು ಎಂದು ಅವರು ನುಡಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗಂಗಾಂಬಿಕಾ ಪಾಟೀಲ್ ಅವರು ಮಾತನಾಡಿ, ಕನ್ನಡ ಭಾಷೆಯ ಸಾಹಿತಿ, ಆಧ್ಯಾತ್ಮ ಚಿಂತಕಿ, ಸಮಾಜಸೇವಕಿ, ಹಾಗೂ ಕುಟುಂಬವತ್ಸಲೆ ಎಂಬ ತ್ರಿವೇಣಿ ಸಂಗಮವಾಗಿರುವ ಶರಣೆ ಜಯದೇವಿ ತಾಯಿ ಲಿಗಾಡೆ ಎನ್ನುವ ಜಂಗಮತಾಯಿ ತಮ್ಮ ಸಾದಾ ಮತ್ತು ಧವಳವಸ್ತ್ರದ ನಿರಾಡಂಬರ ಜೀವನದಿಂದ ಜನಮನ ಗೆದ್ದಿದ್ದಾರೆ. ತಾಯ್ನುಡಿನ ಪ್ರೇಮ, ಕನ್ನಡ ಸಂಸ್ಕೃತಿಯ ಪ್ರಚಾರ, ಶರಣ ಸಾಹಿತ್ಯದ ಪ್ರಸಾರ ಇವೆಲ್ಲವೂ ಅವರ ಜೀವನದ ಧ್ಯೇಯವಾಗಿತ್ತು ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರೊ.ಸಿ ಬಿ ದೇವರಾಜ್, ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಮುಕ್ತುಂಬಿ ಎಂ. ಅವರು ಮಾತನಾಡಿದರು.







