ಬೀದರ್ | ಕಳಪೆಮಟ್ಟದ ಕಾಮಗಾರಿ : ತನಿಖೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಬೀದರ್ : ಭಾಲ್ಕಿ ತಾಲ್ಲೂಕಿನಲ್ಲಿ ನಡೆದ ಜೆಜೆಎಂ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದೆ ಹಾಗಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕಿರಿಯ ಇಂಜಿನಿಯರ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯಿಂದ ಒಂದು ದಿನದ ಧರಣಿ ಸತ್ಯಾಗ್ರಹ ನಡೆಯಿತು.
ಇಂದು ಭಾಲ್ಕಿಯ ತಹಶೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ, ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಭಾಲ್ಕಿ ತಾಲ್ಲೂಕಿನಲ್ಲಿ ನಡೆದ ಜೆಜೆಎಂ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಯನ್ನು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದೆ. ಅದರಲ್ಲಿ ಭಾಗಿಯಾದ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕಿರಿಯ ಇಂಜಿನಿಯರ್ ಗಳನ್ನು ತಕ್ಷಣವೇ ಅಮಾನತು ಮಾಡಬೇಕು. ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಸಂಪತ್ತು ಮುಟ್ಟುಗೋಲು ಹಾಕಿ, ತಾಲ್ಲೂಕಿನಲ್ಲಿ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ತಾಲ್ಲೂಕಿನ ಗ್ರಾಮಗಳಾದ ಮದಕಟ್ಟಿ, ಬಾಜೋಳಗಾ, ಬಾಜೋಳಗಾ (ಕೆ), ಬ್ಯಾಲಹಳ್ಳಿ (ಡಬ್ಲ್ಯೂ), ಮೊರಂಬಿ, ಆರ್.ಗೌಂಡಗಾಂವ್ ಸೇರಿದಂತೆ ಮುಂತಾದ ಕಡೆ ನೀರಿನ ಅಭಾವ ತುಂಬಾ ಕಾಡುತ್ತಿದೆ. ಕಾರಣ ಜೆಜೆಎಂ ಕಾಮಗಾರಿಯಲ್ಲಿ ಮಾಡಿರುವ ನೀರಿನ ನಲ್ಲಿಗಳು ಹಾಗೂ ಮೋಟಾರ್ ಗಳು ಕಳಪೆ ಮಟ್ಟದಿಂದ ಕೂಡಿವೆ. ಇದರಿಂದಾಗಿ ಸ್ವಲ್ಪ ದಿವಸದಲ್ಲೇ ಅವು ಸಂಪೂರ್ಣವಾಗಿ ಕೆಟ್ಟಿ ಹಾಳಾಗಿದ್ದಾವೆ ಎಂದು ಆರೋಪಿಸಲಾಗಿದೆ.
ಜೆಜೆಎಂ ಕೆಲಸವು ಸಂಪೂರ್ಣವಾಗಿ ಕಳಪೆಮಟ್ಟದಿಂದ ಕೂಡಿದ್ದು, ಅದಕ್ಕೆಲ್ಲ ನೇರ ಕಾರಣ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕಿರಿಯ ಇಂಜಿನಿಯರ್ ಆಗಿದ್ದಾರೆ. ಹಾಗಾಗಿ ಅವರನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ 15 ದಿವಸದೊಳಗೆ ಕ್ರಮ ಕೈಗೊಳ್ಳದಿದ್ದರೆ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗಗನ ಫುಲೆ, ದಲಿತ ಮೈನಾರಿಟಿ ಸೇನೆಯ ತಾಲ್ಲೂಕಾ ಅಧ್ಯಕ್ಷ ಮಹೇಂದ್ರ ಪ್ಯಾಗೆ, ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಲೊಕೇಶ್ ಕಾಂಬ್ಳೆ, ಭೀಮ್ ಆರ್ಮಿಯ ತಾಲ್ಲೂಕಾ ಅಧ್ಯಕ್ಷ ಸಿದ್ದಾರ್ಥ್ ಪ್ಯಾಗೆ, ರಾಜೇಂದ್ರ ಕರವಂದೆ, ನಾಗಾರ್ಜುನ್, ಆಕಾಶ್ ಶಿಂಧೆ, ಗೌತಮ್, ಅವಿನಾಶ್, ಆಕಾಶ್ ಹಾಗೂ ಜೈ ಎಸ್. ಕೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.







