ಬೀದರ್ | ಬೆಂಬೆಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಲು ಸಿದ್ರಾಮಯ್ಯ ಆಗ್ರಹ

ಬೀದರ್: ಜಿಲ್ಲೆಯಲ್ಲಿ ಹೆಸರು ಹಾಗೂ ಉದ್ದು ಬೆಳೆಗಳ ಕಟಾವು ಈಗಾಗಲೇ ಪೂರ್ಣಗೊಂಡಿರುವುದರಿಂದ, ತಕ್ಷಣವೇ ಬೆಂಬೆಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಎಸ್. ಸ್ವಾಮಿ ಆಗ್ರಹಿಸಿದರು.
ಬೀದರ್ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಆಗಸ್ಟ್‌ನಲ್ಲಿ ಸುರಿದ ಸತತ ಮಳೆಯಿಂದ ಬೆಳೆ ಹಾನಿ ಸಂಭವಿಸಿದೆ. 72 ಗಂಟೆಗಳೊಳಗೆ ರೈತರಿಂದ ದೂರು ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ವಿಮಾ ಕಂಪನಿಯ ಪ್ರತಿನಿಧಿಯೇ ದೂರುಗಳನ್ನು ದಾಖಲಿಸಬೇಕು. ಈಗಾಗಲೇ ದಾಖಲಾಗಿರುವ ದೂರುಗಳಿಗೆ ಸರ್ವೆ ನಡೆಸಿ, ಪರಿಹಾರ ಪಾವತಿಗಾಗಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ವಿಮಾ ಕಂಪನಿಯ ಜಿಲ್ಲಾ ಪ್ರತಿನಿಧಿ ದಸ್ತಗಿರ್ ಅವರಿಗೆ ಸೂಚಿಸಿದರು.
ಮಳೆಯ ಪರಿಣಾಮವಾಗಿ ಜಿಲ್ಲೆಯ 93,138 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿದೆ. ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಉಮಕಾಂತ್ ವಿ., ಪ್ರಧಾನ ಕಾರ್ಯದರ್ಶಿ ಸಂಗಮೇಶ್ ವಾಲೆ, ಕೃಷಿ ಅಧಿಕಾರಿ ಕೈಲಾಸನಾಥ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.





