ಬೀದರ್ | ಡಾ.ಅಬ್ದುಲ್ ಖದೀರ್ಗೆ ʼಸಿಲ್ವರ್ ಎಲಿಫೆಂಟ್ ರಾಷ್ಟ್ರೀಯʼ ಪ್ರಶಸ್ತಿ

ಡಾ.ಅಬ್ದುಲ್ ಖದೀರ್
ಬೀದರ್ : ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ 2022-23ನೇ ಸಾಲಿನ ಸಿಲ್ವರ್ ಎಲಿಫೆಂಟ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ನೀಡಿದ ಅನುಪಮ ಕೊಡುಗೆಗಾಗಿ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ. ಡಾ.ಅಬ್ದುಲ್ ಖದೀರ್ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಬೀದರ್ನಲ್ಲಿ 2024 ರಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮೊದಲ ಜಾಂಬೊರೇಟ್ ಮಾದರಿಯಾಗಿ ಸಂಘಟಿಸಿದ ಹಿರಿಮೆ ಅವರದ್ದಾಗಿದೆ. ಹಿಂದೆ ರಾಜ್ಯಮಟ್ಟದಲ್ಲಿ ಜಾಂಬೊರೇಟ್ ನಡೆಸಿಕೊಂಡು ಬರಲಾಗುತ್ತಿತ್ತು. ವಿಭಾಗಮಟ್ಟದಲ್ಲೂ ಕೂಡ ಜಾಂಬೊರೇಟ್ ಆಯೋಜನೆಗೆ ಡಾ.ಅಬ್ದುಲ್ ಖದೀರ್ ಅವರೇ ಕಾರಣರಾಗಿದ್ದಾರೆ. ಅವರಿಂದಾಗಿ ಈಗ ವಿಭಾಗಮಟ್ಟದಲ್ಲಿ ಕೂಡ ಜಾಂಬೊರೇಟ್ಗಳು ನಡೆಯುತ್ತಿವೆ.
ಡಾ.ಅಬ್ದುಲ್ ಖದೀರ್ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ. ಉತ್ತರಪ್ರದೇಶದ ಲಕ್ನೋದ ರಾಜಭವನದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಉಪಸ್ಥಿತಿಯಲ್ಲಿ ನ.26 ರಂದು ಮಧ್ಯಾಹ್ನ 3 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಡಾ.ಅಬ್ದುಲ್ ಖದೀರ್ ಅವರಿಗೆ ಸಿಲ್ವರ್ ಎಲಿಫೆಂಟ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದಕ್ಕೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜೂಜಾರೆ ಹಾಗೂ ಜಿಲ್ಲಾ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ ಅವರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.







