Bidar | ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾಗಿ ಕರ್ತವ್ಯದಿಂದ ಬಿಡುಗಡೆಗೊಂಡ ಸಿಬ್ಬಂದಿ ಮರು ನೇಮಕ

ಬೀದರ್: ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಕಾರಣದಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ಹೊರ ಸಂಪನ್ಮೂಲ ಸಿಬ್ಬಂದಿ ಪ್ರಮೋದಕುಮಾರ್ ಅವರನ್ನು 2025–26ನೇ ಸಾಲಿನಲ್ಲಿ ಮತ್ತೆ ಹೊರ ಸಂಪನ್ಮೂಲದ ಆಧಾರದ ಮೇಲೆ ಮರು ನೇಮಕ ಮಾಡಿಕೊಳ್ಳಲಾಗಿದೆ.
ಪ್ರಮೋದಕುಮಾರ್ ಅವರು ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಹಾಯಕರಾಗಿ ಹೊರ ಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ಬಸವಕಲ್ಯಾಣದಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಅವರನ್ನು 2025ರ ಅ.21ರಂದು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು.
ಆದರೆ ಕಾನೂನು ಉಲ್ಲಂಘನೆ ಆರೋಪ ಇದ್ದರೂ ಕೂಡ ಅವರನ್ನು ಮತ್ತೆ 2025–26ನೇ ಸಾಲಿನಲ್ಲಿ ಹೊರ ಸಂಪನ್ಮೂಲದ ಆಧಾರದ ಮೇಲೆ ಮರು ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಾತಿಗೆ ಮೇಲಾಧಿಕಾರಿಗಳೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿದ್ದು, ವಿಷಯ ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದು ಕಡೆ, ಅಡುಗೆ ಸಹಾಯಕರಾಗಿ ನೇಮಕಗೊಂಡಿದ್ದರೂ ಪ್ರಮೋದಕುಮಾರ್ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಸರ್ಕಾರದ ನಿಯಮಾನುಸಾರ ಗ್ರೂಪ್–ಡಿ ವರ್ಗದ ನೌಕರರಾದ ಅಡುಗೆಯವರು ಹಾಗೂ ಅಡುಗೆ ಸಹಾಯಕರನ್ನು ಕಚೇರಿ ಕೆಲಸಗಳಿಗೆ ಬಳಸಬಾರದು ಎಂಬ ಆದೇಶ ಇದ್ದರೂ, ಅವರು ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.







