ಬೀದರ್ | ರಾಜ್ಯಮಟ್ಟದ ಟೇಬಲ್ ಟೆನಿಸ್ ಟೂರ್ನಿ : ಬೆಂಗಳೂರು ದಕ್ಷಿಣ ಪ್ರಥಮ

ಬೀದರ್ : ಅಲ್ಲಮಾ ಇಕ್ಬಾಲ್ ಪದವಿಪೂರ್ವ ವಿಜ್ಞಾನ ಕಾಲೇಜು ಮತ್ತು ಶಾಲಾ ಶಿಕ್ಷಣ ಇಲಾಖೆ ಅವರ ಸಂಯುಕ್ತಾಶ್ರಯದಲ್ಲಿ ಗುರುವಾರ ಆರಂಭವಾದ ಎರಡು ದಿನದ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಟೂರ್ನಿಗೆ ಇಂದು ತೆರೆ ಬಿದ್ದಿದ್ದು, ಬೆಂಗಳೂರು ದಕ್ಷಿಣವು ಪ್ರಥಮ ಸ್ಥಾನ ಗಳಿಸಿತು.
ಇಂದು ನಗರದ ಅಲ್ಲಮಾ ಇಕ್ಬಾಲ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಟೇಬಲ್ ಟೆನಿಸ್ ಟೂರ್ನಿಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಟೂರ್ನಿಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡಗಳು ಪ್ರಥಮ ಸ್ಥಾನ ಗಳಿಸಿದವು. ವಿದ್ಯಾರ್ಥಿಗಳ ವಿಭಾಗದಲ್ಲಿ ಮೈಸೂರು ಹಾಗೂ ವಿದ್ಯಾರ್ಥಿನಿಯರ ವಿಭಾಗದಲ್ಲಿ ಬೆಳಗಾವಿ ತಂಡಗಳು ದ್ವಿತೀಯ ಸ್ಥಾನ ಪಡೆದವು. ಇಂದು ಸಂಜೆ ನಡೆದ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಚಂದ್ರಕಾಂತ್ ಶಹಾಬಾದಕರ್ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ವತಿಯಿಂದ ತೀರ್ಪುಗಾರರಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಹೀನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಖಾದ್ರಿ, ಅಲ್ಲಮಾ ಇಕ್ಬಾಲ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಖಾಜಾ ಪಟೇಲ್, ಓಂಪ್ರಕಾಶ್ ದಡ್ಡೆ, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಉಪನ್ಯಾಸಕರ ಸಂಘದ ಅಧ್ಯಕ್ಷ, ಕಾರ್ಯದರ್ಶಿ, ವಿವಿಧ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.







