ಬೀದರ್ | ಮಾ.2 ರಿಂದ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಮಾ.2, 3 ಹಾಗೂ 4 ರಂದು ಕರ್ನಾಟಕ ಜೀವ ವೈವಿದ್ಯ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವೈದ್ಯ ಪರಿಷತ್ತು ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ 15ನೇ ಪಾರಂಪರಿಕ ವೈದ್ಯ ಸಮ್ಮೇಳನ ನಡೆಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಈ ಸಮ್ಮೇಳನ ಮಠಗಳ ಆಶ್ರಯದಲ್ಲಿ ನಡೆಸಲಾಗುತ್ತಿತ್ತು. ಪ್ರಥಮ ಬಾರಿಗೆ ಸರಕಾರದ ಆಶ್ರಯದಡಿ ನಗರದಲ್ಲಿ ಬೃಹತ್ ಮಟ್ಟದಲ್ಲಿ ಪಾರಂಪರಿಕ ವೈದ್ಯರ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧಡೆಯಿಂದ ಸುಮಾರು 2 ಸಾವಿರ ವೈದ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶತಮಾನಗಳಿಂದ ಪಾರಂಪರಿಕವಾಗಿ ಹರಿದು ಬಂದ ಈ ವೈದ್ಯಕೀಯ ಜ್ಞಾನ ಉಳಿಸಿ ಬೆಳೆಸಬೇಕಾಗಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಸ್ಯ ಪ್ರಭೇದಗಳಿವೆ. ರಾಜ್ಯದ ಜೀವ ವೈವಿದ್ಯತೆ ಶ್ರೀಮಂತವಾಗಿದ್ದು, ಇದನ್ನು ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಪಾರಂಪರಿಕ ವೈದ್ಯ ಪದ್ಧತಿಯಿಂದ ಅನೇಕ ರೋಗಗಳು ವಾಸಿ ಮಾಡಲಾಗುತ್ತದೆ. ವಂಶಪಾರಂಪರೆಯಾಗಿ ಹರಿದು ಬರುತ್ತಿರುವ ಪಾರಂಪರಿಕ ವೈದ್ಯಕೀಯ ಜ್ಞಾನವು ಅಲ್ಲಲ್ಲಿ ಬತ್ತಿ ಹೋಗದಂತೆ ಕ್ರಮ ವಹಿಸಬೇಕಾಗುತ್ತದೆ ಎಂದರು.
ಪ್ರತಿಯೊಂದು ಸಸ್ಯವು ಒಂದಿಲ್ಲೊಂದು ಔಷಧಿ ಗುಣ ಹೊಂದಿರುತ್ತದೆ. ರೋಗವಿಲ್ಲದ ಮನುಷ್ಯನಿಲ್ಲ, ಔಷಧಿ ಗುಣವಿಲ್ಲದ ಸಸ್ಯವಿಲ್ಲ ಎಂಬ ಗಾದೆ ಮಾತು ಪ್ರಸ್ತುತವೆನಿಸುತ್ತದೆ. ಆದ್ದರಿಂದ ಪಾರಂಪರಿಕ ವೈದ್ಯ ಶಾಸ್ತ್ರ ರಕ್ಷಣೆ ಮಾಡುವುದು ಮಹತ್ವದಾಗಿದೆ ಎಂದು ನುಡಿದರು.
ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ತಜ್ಞರು, ಸಂಶೋಧಕರಿಂದ ಒಟ್ಟು 11 ಗೋಷ್ಠಿಗಳು ಜರುಗಲಿವೆ. ಸಮ್ಮೇಳನದ ಯಶಸ್ವಿಗಾಗಿ ಒಟ್ಟು 17 ಸಮಿತಿ ರಚಿಸಲಾಗಿದೆ. ಉತ್ತಮ ಆಹಾರ ಹಾಗೂ ವಸತಿಯ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಮಾ.1 ರಂದು ಬೆಳಿಗ್ಗೆ 9 ಗಂಟೆಗೆ ಎಸ್.ಕೆ.ಜಾಬಶೆಟ್ಟಿ ಆರ್ಯುವೇದಿಕ್ ಕಾನೂನು ಸಿದ್ಧಾರೂಢ ಮಠದಿಂದ ರಂಗ ಮಂದಿರದವರೆಗೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ. 11 ಗಂಟೆಗೆ ಬೆಲ್ದಾಳೆ ಕನ್ವೇನ್ಶನ್ ಹಾಲ್ ನಲ್ಲಿ ಉದ್ಘಾಟನಾ ಸಮಾರಂಭವಿದೆ. ನಂತರದ ಕಾರ್ಯಕ್ರಮಗಳು ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಜರುಗಲಿವೆ ಎಂದು ಮಾಹಿತಿ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಪ್ರೊ.ಜಗನ್ನಾಥ್ ಹೆಬ್ಬಾಳೆ, ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಜಿ.ಮಹಾದೇವಯ್ಯ ಹಾಗೂ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







