ಬೀದರ್ | ಜು.31 ರೊಳಗೆ ಒಳಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ : ಫರ್ನಾಂಡಿಸ್ ಹಿಪ್ಪಳಗಾಂವ್

ಬೀದರ್ : ಜು.31 ರೊಳಗೆ ಒಳಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಅವರು ಎಚ್ಚರಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಒಲ್ಲದ ಮನಸಿನಿಂದ ಕುಂಟು ನೆಪ ಹೇಳಿ ಒಳಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಬರುವ ಜು.31 ರ ಒಳಗಾಗಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಗೋವಿಂದ್ ಕಾರಜೋಳ ಹಾಗೂ ಎ.ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಸುಮಾರು 30 ವರ್ಷದಿಂದ ಮಾದಿಗ ಸಮಾಜದ ಒಳಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 40 ದಿನಗಳಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ ಒಳಮೀಸಲಾತಿ ಜಾರಿ ಮಾಡುವುದಾಗಿ ಹೇಳಿದರು. ಆದರೆ ಕೋರ್ಟ್ ತೀರ್ಪು ನೀಡಿ ಆಗಸ್ಟ್ 14ಕ್ಕೆ ಒಂದು ವರ್ಷ ಪೂರ್ಣವಾಗುತ್ತದೆ. ಒಳಮಿಸಲಾತಿ ಜಾರಿ ಮಾಡಲು ಸಿದ್ದರಾಮಯ್ಯನವರ ಸರ್ಕಾರಕ್ಕೆ ಇನ್ನೆಷ್ಟು ದಿನ ಬೇಕು ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ವೈಜ್ಞಾನಿಕ ದತ್ತಾಂಶ ಇದ್ದರೆ ಒಳಮೀಸಲಾತಿ ಜಾರಿ ಮಾಡಬಹುದು ಎಂದು ಹೇಳಿದೆ. ಇವರು ಜು.31 ರ ಒಳಗಾಗಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಹೋರಾಟದ ಜೊತೆಗೆ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮಾದಿಗ ಸಮಾಜದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹಿಷ್ಕಾರ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಪ್ರಮುಖರಾದ ದಯಾನಂದ್ ರೇಕುಳಗಿ, ಜೈಶೀಲ್ ಕಲವಾಡೆ, ಹರೀಶ್ ಗಾಯಕವಾಡ್, ಪ್ರವೀಣ್ ಫತ್ತೆಪುರ್, ಅಬ್ರಹಾಂ ಸೂರ್ಯವಂಶಿ, ಶಿವರಾಜ್, ವಿಶಾಲ್ ರೇಕುಳಗಿ ಹಾಗೂ ಪ್ರಕಾಶ್ ನಾಗುರೆ ಇದ್ದರು.







