ಬೀದರ್ | ನಮ್ಮ ಸಮಾಜದಲ್ಲಿ ಒಡಕು ಉಂಟಾಗಬಾರದು ಎನ್ನುವ ಕಾರಣಕ್ಕೆ ದಸರಾ ದರ್ಬಾರ್ ಕಾರ್ಯಕ್ರಮದಿಂದ ದೂರ ಉಳಿಯಲಾಗಿದೆ : ಹಾರಕುಡ ಶ್ರೀ

ಬೀದರ್ : ನಮ್ಮ ಸಮಾಜದಲ್ಲಿ ಒಡಕು ಉಂಟಾಗಬಾರದು ಎನ್ನುವ ಕಾರಣಕ್ಕೆ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಕಾರ್ಯಕ್ರಮದಿಂದ ನಾವು ದೂರ ಸರಿದಿದ್ದೇವೆ ಎಂದು ಹಾರಕೂಡ ಶ್ರೀಗಳಾದ ಚನ್ನವೀರ್ ಶಿವಾಚಾರ್ಯ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಭಕ್ತರು ಮತ್ತು ಕೆಲವು ಮಠಾಧೀಶರು ಸಭೆ ಸೇರಿ ಶ್ರೀ ರಂಭಾಪುರಿ ಜಗದ್ಗುರುಗಳ ವಾರ್ಷಿಕ ದಸರಾ ದರ್ಬಾರ್ ನ್ನು ಮಹಾತ್ಮಾ ಬಸವಣ್ಣನವರ ಕಾಯಕದ ಪುಣ್ಯ ಭೂಮಿ ಬಸವಕಲ್ಯಾಣದಲ್ಲಿ ಆಚರಿಸಲು ತೀರ್ಮಾನಿಸಲಾಯಿತು.
ಆ.10 ರಂದು ಹಾರಕೂಡ ಮಠದಲ್ಲಿ ಸಮಿತಿಯ ಅಧ್ಯಕ್ಷ ಈಶ್ವರ್ ಖಂಡ್ರೆಯವರ ಅನುಮತಿ ಪಡೆದು ಸಮಿ ತಿಯ ಕಾರ್ಯಧ್ಯಕ್ಷ ಹಾಗೂ ಶಾಸಕ ಶರಣು ಸಲಗರ್ ಅವರ ಸಮ್ಮುಖದಲ್ಲಿ ಹಾರಕೂಡ ಶ್ರೀಗಳ ನೇತೃತ್ವದಲ್ಲಿ ಎಲ್ಲರ ಸಹಮತದೊಂದಿಗೆ ವಿಜಯ ದಶಮಿಯಂದು ಬಸವಕಲ್ಯಾಣದಲ್ಲಿ ನಡೆಯುವ ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿಯ ಮೆರವಣಿಗೆಯನ್ನು ಭಕ್ತರ ಹೆಗಲ ಮೇಲೆ ಮಾಡದೆ ಅಲಂಕಾರಿತ ವಾಹನದಲ್ಲಿ ನಡೆಸಲು ಒಮ್ಮತದಿಂದ ತೀರ್ಮಾನಿಸಲಾಯಿತು. ಆದರೆ ಆ.13 ರಂದು ತಡೋಳಾ ಶ್ರೀಗಳ ನೇತೃತ್ವದಲ್ಲಿ 20 ಶ್ರೀಗಳು ಹಾರಕೂಡ ಮಠಕ್ಕೆ ಆಗಮಿಸಿ ನಾವು ದಸರಾ ದರ್ಬಾರದ ವಿಜಯ ದಶಮಿಯ ದಿನ ಬಸವಕಲ್ಯಾಣದಲ್ಲಿ ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿಯನ್ನು ಭಕ್ತರ ಹೆಗಲ ಮೇಲೆಯೇ ಮಾಡುತ್ತೇವೆ ಎಂದು ಹಠ ಹಿಡಿದು ನಿರ್ಗಮಿಸಿದರು ಎಂದಿದ್ದಾರೆ.
ಬಸವಣ್ಣನವರ ಕಾಯಕದ ಪುಣ್ಯ ಭೂಮಿಯಲ್ಲಿ ಬಸವಣ್ಣ ನವರ ಆಶಯದಂತೆ ಮತ್ತು ತತ್ವ ಸಿದ್ಧಾಂತಕ್ಕೆ ಧಕ್ಕೆ ಬರಬಾರದು ಮತ್ತು ರಂಭಾಪುರಿ ಪೀಠದ ಘೋಷ ವಾಕ್ಯ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉದ್ದೇಶದಂತೆ ಅಡ್ಡ ಪಲ್ಲಕ್ಕಿ ಮೆರವಣಿಗೆಯನ್ನು ನಮ್ಮ ಸಮಿತಿಯ ತೀರ್ಮಾನದಂತೆ ಭಕ್ತರು ಹೊರುವ ಬದಲು ಅಲಂಕಾರಿತ ವಾಹನದಲ್ಲಿ ಮಾಡಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಈಗ ರಂಭಾಪುರಿ ಶ್ರೀಗಳು ಅವರ ಪೀಠದ ಪರಂಪರೆಯಂತೆ ಭಕ್ತರ ಹೆಗಲ ಮೇಲೆಯೇ ಪಲ್ಲಕ್ಕಿ ಉತ್ಸವ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ನಾವು ಈ ಮೊದಲು ಸಮಿತಿಯವರು ತೆಗೆದುಕೊಂಡ ನಿರ್ಣಯ ಬದಲಿಸಲು ನಿರಾಕರಿಸಿ ದಸರಾ ದರ್ಬಾರ್ ಕಾರ್ಯಕ್ರಮ ದಿಂದ ದೂರ ಸರಿಯಲು ತೀರ್ಮಾಸಿದ್ದೇವೆ ಎಂದು ತಿಳಿಸಿದ್ದಾರೆ.
ಕೋಟ್ಯಂತರ ಬಸವ ಭಕ್ತರಿಗೂ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಜನರ ಮನಸ್ಸುಗಳನ್ನು ಘಾಸಿ ಗೊಳಿಸಬಾರದೆಂದು ದಸರಾ ದರ್ಬಾರದಿಂದ ನಾವು ದೂರ ಸರಿದಿದ್ದೇವೆ. ಈ ಸಮಾಜದಲ್ಲಿ ಒಡಕು ಉಂಟಾಗಬಾರದೆಂದು ನಮ್ಮ ನಿರ್ಣಯಕ್ಕೆ ಬದ್ದವಾಗಿ ದಸರಾ ದರ್ಬಾರದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮ ಮಠ ಮತ್ತು ನಾನು ಎಂದೂ ಯಾರಿಗೂ ಮನಸ್ಸು ನೋಯಿಸಿಲ್ಲ, ನೋಯಿಸುವುದಿಲ್ಲ. ಅವರ ಪರಂಪರೆ ಬೇಡ ಎನ್ನಲು ನಮಗೆ ಹಕ್ಕಿಲ್ಲ. ಆದರೆ ಅವರು ಆಚರಿಸುವ ದಸರಾ ದರ್ಬಾರಕ್ಕೆ ನಮ್ಮ ಶುಭ ಹಾರೈಕೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.







