ಬೀದರ್ | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಮುಷ್ಕರ

ಬೀದರ್ : ವಾರದಲ್ಲಿ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಶನಿವಾರವನ್ನು ಸಂಪೂರ್ಣ ಸಾಮಾನ್ಯ ರಜೆ ಎಂದು ಘೋಷಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ ಬೀದರ್ ಘಟಕದ ವತಿಯಿಂದ ಮಂಗಳವಾರ ಒಂದು ದಿನದ ಮುಷ್ಕರ ನಡೆಸಲಾಯಿತು.
ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಶಾಖೆ ಎದುರಿನ ಶಿವಾಜಿ ಚೌಕ್ ಬಳಿ ಬೆಳಗ್ಗೆ 11 ಗಂಟೆಗೆ ಈ ಮುಷ್ಕರ ನಡೆಯಿತು.
ಈಗಾಗಲೇ ನಾಲ್ಕನೇ ಶನಿವಾರ, ಭಾನುವಾರ ಹಾಗೂ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮೂರು ದಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸಿರಲಿಲ್ಲ. ವಾರದಲ್ಲಿ ಐದು ದಿನಗಳಷ್ಟೇ ಕೆಲಸ ಇರಬೇಕು ಹಾಗೂ ಶನಿವಾರವನ್ನು ಸಂಪೂರ್ಣ ರಜೆ ಎಂದು ಘೋಷಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ ಎಂದು ಯುಎಫ್‌ಬಿಯು ಆರೋಪಿಸಿದೆ.
ಶನಿವಾರ ರಜೆ ನೀಡಿದಲ್ಲಿ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ಬ್ಯಾಂಕ್ ನೌಕರರು ಸಿದ್ಧರಿದ್ದಾರೆ ಎಂಬುದನ್ನೂ ಯುಎಫ್‌ಬಿಯು ಕೇಂದ್ರ ಸರ್ಕಾರಕ್ಕೆ ತಿಳಿಸಿದರೂ, ಇದಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ ಎಂದು ಸಂಘಟನೆ ದೂರಿದೆ.
ಈ ಮುಷ್ಕರದ ಪರಿಣಾಮವಾಗಿ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಬೀದರ್ ಜಿಲ್ಲೆಯಲ್ಲಿಯೂ ಸಾರ್ವಜನಿಕ ಬ್ಯಾಂಕ್‌ಗಳ ಸೇವೆಗಳು ಅಸ್ತವ್ಯಸ್ತವಾಗಿದ್ದವು. ಆದರೆ ಖಾಸಗಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.
ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಬೀದರ್‌ನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಯುಎಫ್‌ಬಿಯು ಬೀದರ್ ಘಟಕದ ಸಂಚಾಲಕ ರಮೇಶ್ ಶಿಂಧೆ ನೇತೃತ್ವ ವಹಿಸಿದ್ದರು.
ಸಂತೋಷಕುಮಾರ್ ಮಿತ್ರಾ, ಪರಮೇಶ್ವರ್ ರೆಡ್ಡಿ, ಶೇಶಿಕಾಂತ್ ಕಾಳೆ, ಶೇಖ್ ನಿಸಾರ್, ಸಿದ್ರಾಮ್ ಸೀತಾ, ಅಶೋಕಕುಮಾರ್, ಸುಧಾರಾಣಿ, ಲಲಿತಾ ಬಿರಾದಾರ್, ದೀಪಿಕಾ ಮೋರೆ, ಕೇನರಾ ಬ್ಯಾಂಕಿನ ಸಂತೋಷ್ ಪರಮ್ಮಾ, ಚಂದ್ರಶೇಖರ್, ಸಂತೋಷ್ ಕೋರೆ ಹಾಗೂ ಬ್ಯಾಂಕ್ ಆಫ್ ಇಂಡಿಯಾದ ಸಚಿನ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಮುಷ್ಕರದಲ್ಲಿ ಭಾಗವಹಿಸಿದ್ದರು.







