ಬೀದರ್ | ಎಸೆಸೆಲ್ಸಿಯಲ್ಲಿ ಜಿಲ್ಲೆಗೆ ಶೇ.95ರಷ್ಟು ಫಲಿತಾಂಶ ತರಲು ಪ್ರಯತ್ನಿಸಿ : ಸಿಇಒ ಡಾ.ಗಿರೀಶ್ ಬದೋಲೆ

ಬೀದರ್ : ಬರುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಗೆ ಶೇ.95ರಷ್ಟು ಫಲಿತಾಂಶ ತರುವ ಗುರಿಯೊಂದಿಗೆ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಸಮನ್ವಯದಿಂದ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಹೇಳಿದರು.
ಶುಕ್ರವಾರ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಎ.ಆರ್.ಎಂ ಸಭಾಂಗಣದಲ್ಲಿ ನಾಗರಿಕ ಸನ್ಮಾರ್ಗ ಸಮಿತಿ ವತಿಯಿಂದ ಬೀದರ್, ಔರಾದ್ ಮತ್ತು ಭಾಲ್ಕಿ ತಾಲ್ಲೂಕುಗಳ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಮತ್ತು ಎಸ್‌ಡಿಎಂಸಿ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ ಬೀದರ್ ಜಿಲ್ಲೆಗೆ 31ನೇ ಸ್ಥಾನ ಲಭಿಸಿದ್ದು, ಒಟ್ಟಾರೆ ಫಲಿತಾಂಶ ಶೇ.64 ಆಗಿತ್ತು. ಈ ಬಾರಿ ಫಲಿತಾಂಶ ಹೆಚ್ಚಿಸುವುದರ ಜೊತೆಗೆ ಜಿಲ್ಲೆಯ ಸ್ಥಾನಮಾನವನ್ನು ಸುಧಾರಿಸಲು ಎಲ್ಲರೂ ಗಂಭೀರವಾಗಿ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.
ಕಳೆದ ವರ್ಷ ಜಿಲ್ಲೆಯ 70 ಶಾಲೆಗಳು ಕೇವಲ ಶೇ.20 ರಿಂದ ಶೇ.30ರಷ್ಟು ಫಲಿತಾಂಶ ಪಡೆದಿದ್ದವು. ಇಂತಹ ಶಾಲೆಗಳ ಫಲಿತಾಂಶ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. 8ನೇ ಹಾಗೂ 9ನೇ ತರಗತಿಗಳಲ್ಲೇ ಕಲಿಕಾ ಮಟ್ಟವನ್ನು ಸುಧಾರಿಸಿದರೆ, ಎಸೆಸೆಲ್ಸಿ ಫಲಿತಾಂಶ ಸಹಜವಾಗಿಯೇ ಹೆಚ್ಚಳವಾಗುತ್ತದೆ ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಸಂಯೋಜಿತ ಪ್ರಯತ್ನ ಅಗತ್ಯವಿದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವುದು, ಹಾಜರಾತಿ ಹೆಚ್ಚಿಸುವುದು ಮೊದಲಾದ ಅಂಶಗಳಿಗೆ ಆದ್ಯತೆ ನೀಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಎಐಸಿಯು ಮೂಲಕ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಂಘಟಿತ ಪ್ರಯತ್ನ ಅವಶ್ಯಕವಾಗಿದೆ. ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಮನಸ್ಸು ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬಹುದು ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಸೈಯದ್ ಫುರ್ಕಾನ್ ಪಾಷಾ ಹಾಗೂ ಜಗದೀಶ್ ನಿಂಬೂರ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕೆ ಅಕ್ಕ, ಸೇಂಟ್ ಜೋಸೆಫ್ ಚರ್ಚ್‌ನ ರೆವರೆಂಡ್ ಫಾದರ್ ವಿಲ್ಸನ್ ಫರ್ನಾಂಡೀಸ್, ಫಾದರ್ ಕ್ಲೇರಿ ಡೀಸೋಜಾ, ಕೌಠಾ(ಬಿ) ಬಸವ ಯೋಗಾಶ್ರಮದ ಬೆಲ್ದಾಳ್ ಸಿದ್ಧರಾಮ ಶರಣರು, ಇಂದೋರ್ ಕೈಫುಲ್ ಇಮಾಮ್ ನಿರ್ದೇಶಕ ಮುಫ್ತಿ ಅಬುಬಕರ್ ಜಾಬೇರ್ ಖಾಸ್ಮಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ್ ಎಚ್.ಜಿ, ಡಯಟ್ ನಿರ್ದೇಶಕ ಗುರುಪ್ರಸಾದ್, ಸಮಿತಿಯ ಕಾರ್ಯದರ್ಶಿ ಅಶೋಕ್ ವಡಗಾವೆ, ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಸವರಾಜ್ ಮಾಳಗೆ ನಿರೂಪಿಸಿದರು, ಡಾ. ಶ್ವೇತಾ ವಂದಿಸಿದರು.







