ಬೀದರ್ | ಪರಿಶಿಷ್ಟ ಜಾತಿ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ : ಪ್ರಸನ್ನಕುಮಾರ್

ಬೀದರ್: ಭಾರತದ ಯಾವ ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಆಗದ ಅನ್ಯಾಯ, ಕರ್ನಾಟಕದ ಪರಿಶಿಷ್ಟ ಜಾತಿಯವರಿಗೆ ಮಾತ್ರ ಆಗುತ್ತಿದೆ. ಪರಿಶಿಷ್ಟ ಜಾತಿಯಲ್ಲಿ ಅನೈತಿಕವಾಗಿ ಸೇರಿರುವ ಜಾತಿಗಳನ್ನು ಹೊರಹಾಕಲು ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಿದೆ ಎಂದು ಪ್ರಸನ್ನಕುಮಾರ್ ಹೇಳಿದರು.
ಬುಧವಾರ ಸಂಜೆ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ ಪುನಾ ಒಪ್ಪಂದದ ಅಂಗವಾಗಿ ಮತದಾನದ ಹಕ್ಕು ಮತ್ತು ಒಳಮೀಸಲಾತಿ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಎಂದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಹಾಗೂ ಅಸ್ಪೃಶ್ಯತೆಯನ್ನು ಅನುಭವಿಸುವ ಜನ. ಅಂಬೇಡ್ಕರ್ ಅವರ ಪ್ರಕಾರ ಅಸ್ಪೃಶ್ಯತೆಯ ಆಚರಣೆ ಎದುರಿಸುವವರು ಮಾತ್ರ ಅಸ್ಪೃಶ್ಯರು. ಆದರೆ ನಾವು ಆ ದಾಖಲೆಯನ್ನೇ ಉಲ್ಲಂಘಿಸುತ್ತಿದ್ದೇವೆ. ಅದರ ಪರಿಣಾಮವಾಗಿ ಔರಾದ್‌ನಲ್ಲಿ ಅಸ್ಪೃಶ್ಯರಲ್ಲದವರಾದರೂ ಶಾಸಕರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಅವರು, ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು ಎಂಬ ಸ್ಪಷ್ಟ ಆದೇಶವಿದ್ದರೂ, ಸರ್ಕಾರ ಅದನ್ನು ಪಾಲಿಸದೇ ಫೈಲ್ ಅನ್ನು ಬಾಕಿ ಇಟ್ಟುಕೊಂಡಿದೆ. ಇದರಿಂದ ಅನ್ಯಾಯ ಮುಂದುವರೆದಿದ್ದು, ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
ಡಾ. ಸಿದ್ದರಾಮ ಬೆಲ್ದಾಳ್ ಶರಣರು ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನೇ ಅಸ್ಪೃಶ್ಯರ ಹಕ್ಕುಗಳಿಗಾಗಿ ಅರ್ಪಿಸಿದ್ದಾರೆ. ಮತದಾನದ ಹಕ್ಕು, ಶಿಕ್ಷಣದ ಹಕ್ಕು ಹಾಗೂ ರಾಜಕೀಯ ಮೀಸಲಾತಿ ತಂದುಕೊಟ್ಟಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು ಮತ್ತು ಯುವಕರು ಅಂಬೇಡ್ಕರ್ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವಸೇನೆ ರಾಜ್ಯಾಧ್ಯಕ್ಷ ರಾಜಕುಮಾರ್ ಗೂನಳ್ಳಿ, ರಾಜ್ಯ ಗೌರವಾಧ್ಯಕ್ಷ ಚಂದ್ರಕಾಂತ್ ನಿರಾಟೆ, ಉಪಾಧ್ಯಕ್ಷ ಸುರೇಶ್ ಘಾಂಗ್ರೆ, ಸುಧಾಕರ್ ಏಕಂಬೇಕರ್, ಜಿಲ್ಲಾಧ್ಯಕ್ಷ ನಿತೀಶ್ ಉಪ್ಪೆ, ಘಾಳೆಪ್ಪಾ ಭೋಸಲೆ, ವಿನೋದ್ ಅಪ್ಪೆ, ಸೋಮಶೇಖರ್ ಬಿರಾದಾರ್, ಮಾರುತಿ ಭಂಗಾರೆ ಸೇರಿದಂತೆ ಅನೇಕ ಗಣ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು.







