Bidar | ಕಾರಂಜಾ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡದಿದ್ದರೆ ಹೋರಾಟ: ಲಕ್ಷ್ಮಣ್ ದಸ್ತಿ ಎಚ್ಚರಿಕೆ

ಬೀದರ್: ಕಾರಂಜಾ ಯೋಜನೆಯ ಸಂತ್ರಸ್ತ ರೈತರಿಗೆ ಸರ್ಕಾರ ಕಾಲಮಿತಿಯೊಳಗೆ ಪರಿಹಾರ ಹಣ ಬಿಡುಗಡೆ ಮಾಡದಿದ್ದರೆ ಎರಡನೇ ಹಂತದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಏಕೈಕ ಬೃಹತ್ ನೀರಾವರಿ ಯೋಜನೆಯಾದ ಕಾರಂಜಾ ಯೋಜನೆಯು ಜಿಲ್ಲೆಯ ಜನರ ಜೀವನಾಡಿಯಾಗಿದೆ. ಆದರೆ, ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಹಾಗೂ ಬೀದರ್ ಜಿಲ್ಲೆಯ ಬಗ್ಗೆ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಐದು ದಶಕಗಳ ಹಿಂದೆ ಕಾರಂಜಾ ಯೋಜನೆಗಾಗಿ ಯಾವುದೇ ಷರತ್ತಿಲ್ಲದೆ ಭೂಮಿ ನೀಡಿದ ರೈತರಿಗೆ ಇಂದಿಗೂ ಸಮರ್ಪಕ ಪರಿಹಾರ ದೊರೆತಿಲ್ಲ. ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ 2005ರಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಆದರೆ, 2014ರಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಶಿಫಾರಸನ್ನು ತಿರಸ್ಕರಿಸಲಾಯಿತು. 2018ರಲ್ಲಿಯೂ ಅಂದಿನ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಪರಿಹಾರ ನೀಡುವ ಭರವಸೆ ನೀಡಿದ್ದರೂ ಅದನ್ನು ಈಡೇರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2022ರಿಂದ ಸತತ 920 ದಿನಗಳ ಕಾಲ ಅಹೋರಾತ್ರಿ ಸತ್ಯಾಗ್ರಹ ನಡೆಸಿದ ಬಳಿಕ ಸರ್ಕಾರ ಹೋರಾಟಕ್ಕೆ ಸ್ಪಂದಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರ ಸಹಕಾರದೊಂದಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಬೆಂಗಳೂರಿನಲ್ಲಿ ಹಾಗೂ ಬೀದರ್‌ನಲ್ಲಿಯೂ ಮುಖ್ಯಮಂತ್ರಿಗಳು ಕಾಲಮಿತಿಯಲ್ಲಿ ಪರಿಹಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಈವರೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ, ತೆಲಂಗಾಣ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಎಂದು ಹೇಳಿದರೆ ಮುಂದಿನ ಹೋರಾಟದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಈ ಕುರಿತು ಒಂದೆರಡು ದಿನಗಳಲ್ಲಿ ಸಭೆ ನಡೆಸಿ ಹೋರಾಟದ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು. ಅಲ್ಲದೆ, ‘ಹೋರಾಟ ಸಮಿತಿಯ ನಡೆ ಜನಪ್ರತಿನಿಧಿಗಳ ಮನೆ ಕಡೆ’ ಎಂಬ ಅಭಿಯಾನವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಖ್ಯಾತ ಚಿಂತಕ ಪ್ರೊ.ಆರ್.ಕೆ.ಹುಡುಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿಕೊಳ್ಳುತ್ತದೆ. ಈಗಾಗಲೇ ನಮ್ಮ ಸಮಿತಿಯೊಂದಿಗೆ ಎರಡು-ಮೂರು ಬಾರಿ ಸಭೆ ನಡೆಸಿದ್ದರೂ ರೈತರಿಗೆ ಪರಿಹಾರ ಏಕೆ ನೀಡಿಲ್ಲ ಎಂಬುದೇ ನಮ್ಮ ಯಕ್ಷಪ್ರಶ್ನೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಬಸವರಾಜ್ ದೇಶಮುಖ, ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೊಚಕನಳ್ಳಿ, ವಿನಯಕುಮಾರ್ ಮಾಳಗೆ, ಪ್ರಮುಖರಾದ ರಾಜಪ್ಪ ಕೋಸಂ, ರಾಜಶೇಖರ್, ಯೂಸುಫ್ ಮಿಯಾ, ವೀರೇಂದ್ರ ಭತ್ಮೂರ್ಗೆ, ಸಂಗಾರೆಡ್ಡಿ, ಚಂದ್ರಶೇಖರ್ ಮುತ್ತಣ್ಣ, ಮಾದಪ್ಪ, ರೋಹನಕುಮಾರ್ ಹಾಗೂ ಲಕ್ಷ್ಮೀಬಾಯಿ ಕೌದೆ ಉಪಸ್ಥಿತರಿದ್ದರು.






