Bidar | ವಿದ್ಯಾರ್ಥಿಗಳು 18 ವರ್ಷದ ನಂತರ ಲೈಸೆನ್ಸ್ ಪಡೆದು ವಾಹನ ಚಲಾಯಿಸಬೇಕು : ವಿಜಯಕುಮಾರ್ ಉಮ್ಮರ್ಗೆ

ಬೀದರ್ : ರಸ್ತೆಗಳಲ್ಲಿ ಸಂಚರಿಸುವಾಗ ಎಲ್ಲ ವಿದ್ಯಾರ್ಥಿಗಳು ಎಡಬದಿಯಿಂದಲೇ ನಡೆದುಕೊಂಡು ಬರಬೇಕು ಹಾಗೂ 18 ವರ್ಷ ತುಂಬಿದ ಬಳಿಕ ಲೈಸೆನ್ಸ್ ಪಡೆದು ಮಾತ್ರ ವಾಹನ ಚಲಾಯಿಸಬೇಕು ಎಂದು ಬಸವಕಲ್ಯಾಣ ಮೋಟಾರು ವಾಹನ ನಿರೀಕ್ಷಕ ವಿಜಯಕುಮಾರ್ ಉಮರ್ಗೆ ಹೇಳಿದರು.
ಹುಲಸೂರು ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಕ್ಬಾಲ್ ಪಟೇಲ್ ಪಿಯು ಕಾಲೇಜು ಹಾಗೂ ಕಾಳೆ ಮೋಟಾರು ವಾಹನ ತರಬೇತಿ ಶಾಲೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ಸಂಚಾರ ಚಿಹ್ನೆಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಹಲವರು ಅಂಗವಿಕಲರಾಗುತ್ತಿದ್ದಾರೆ. ಆದ್ದರಿಂದ ಸಂಚಾರ ಚಿಹ್ನೆಗಳನ್ನು ಗಮನಿಸಿ ವಾಹನ ಚಲಾಯಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದ್ವಿಚಕ್ರ ವಾಹನ ಸವಾರಿ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಜೀವ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹುಲಸೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪಂಡಿತ್ ಮಾತನಾಡಿ, ವಿದ್ಯಾರ್ಥಿಗಳು ಅತಿವೇಗದಲ್ಲಿ ವಾಹನ ಚಲಾಯಿಸಬಾರದು ಹಾಗೂ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸಬಾರದು ಎಂದು ಸೂಚಿಸಿದರು.
ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಫಯಾಜ್ ಪಟೇಲ್ ಮಾತನಾಡಿ, ದ್ವಿಚಕ್ರ ವಾಹನ ಚಲಾಯಿಸುವಾಗ ಹೆಡ್‌ಫೋನ್, ಬ್ಲೂಟೂತ್ ಅಥವಾ ಮೊಬೈಲ್ ಬಳಕೆ ಮಾಡಬಾರದು. ವಾಹನದ ಅಗತ್ಯ ದಾಖಲೆಗಳನ್ನು ಸದಾ ಜೊತೆಯಲ್ಲಿ ಇಟ್ಟುಕೊಂಡು, ಅವುಗಳನ್ನು ಸಮಯಕ್ಕೆ ಸರಿಯಾಗಿ ನವೀಕರಿಸಿಕೊಳ್ಳಬೇಕು ಎಂದು ಹೇಳಿದರು.
ಕಾಳೆ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯ ಪ್ರಶಾಂತ್ ಕಾಳೆ ಮಾತನಾಡಿ, ಮದುವೆ, ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಹೆಲ್ಮೆಟ್ ಅನ್ನು ಉಡುಗೊರೆಯಾಗಿ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಸಬಿಯಾ ಫಯಾಜ್ ಪಟೇಲ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಕ್ಷ್ಮಣ ಎ. ಸೂರ್ಯವಂಶಿ ನಿರೂಪಿಸಿ, ವಂದಿಸಿದರು.






