ಬೀದರ್ | ಕಬ್ಬಿಗೆ ಬೆಲೆ ನಿಗದಿ ವಿಚಾರ : ಪ್ರತಿಭಟನಾ ಸ್ಥಳಕ್ಕೆ ಸಚಿವರ ಭೇಟಿ

ಬೀದರ್ : ಕಬ್ಬಿನ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದ ಹತ್ತಿರ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಭೇಟಿ ನೀಡಿ, ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದರೂ ಕೂಡ, ಆ ಭರವಸೆಯನ್ನು ಒಪ್ಪದ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,100 ರೂ. ಬೆಲೆ ನಿಗದಿಗೊಳಿಸಬೇಕು. ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ನೀಡುವ ಕಬ್ಬಿನ ದರದಂತೆ ನಮ್ಮ ಜಿಲ್ಲೆಯ ರೈತರಿಗೂ ಸಿಗಬೇಕು. ಅತಿವೃಷ್ಟಿಯಿಂದಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ರೈತರು ಸಚಿವರನ್ನು ಕೇಳಿಕೊಂಡರು.
ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಕಬ್ಬಿನ ಬೆಲೆ ನಿಗದಿ ಕುರಿತು ಜಿಲಾಧಿಕಾರಿ ಈಗಾಗಲೇ ಮೂರು ಸಭೆಗಳು ನಡೆಸಿ ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ 2,900 ರೂ. ದರ ನಿಗದಿ ಮಾಡಿದ್ದಾಗಿ ಹೇಳಿದ್ದಾರೆ. ನಿಮ್ಮ ಬೇಡಿಕೆ ಬಗ್ಗೆ ನಾನು ಕಾರ್ಖಾನೆಯವರ ಜೊತೆಗೆ ಮಾತನಾಡಿದ್ದೇನೆ. ಅವರು ನಿಮ್ಮ ಬೇಡಿಕೆಗೆ ಸಕರಾತ್ಮಕವಾಗಿ ಒಪ್ಪಲು ಸಿದ್ಧರಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಪರವಾಗಿದ್ದು, ಸರಕಾರದ ವತಿಯಿಂದ 50 ರೂ. ಘೋಷಣೆ ಮಾಡಿದ್ದಾರೆ. ಹಾಗೆಯೇ ಕಾರ್ಖಾನೆಗಳು ಹೆಚ್ಚುವರಿಯಾಗಿ 50 ರೂ. ನೀಡಬೇಕು ಎನ್ನುವ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಅನೇಕ ಕಾರ್ಖಾನೆಗಳಿದ್ದು, ಕೆಲವೊಂದು ಕಡೆ ಹೆಚ್ಚು ಮತ್ತು ಕೆಲವೊಂದು ಕಡೆ ಕಡಿಮೆ ಇಳುವರಿ ಬರುತ್ತದೆ. ಇಳುವರಿ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿ ಮಾಡಲಾಗುವುದು. ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡುತ್ತದೆ. ಸರ್ಕಾರದ ಆದೇಶ ಪಾಲಿಸದ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಲಾಭ ಪಡೆಯುವ ಕೆಲಸ ಮಾಡಬಾರದು ಎಂದರು.
ನಾಳೆಯೇ ಮುಖ್ಯಮಂತ್ರಿಗಳ ಜೊತೆಗೆ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಹೆಚ್ಚಿನ ಪರಿಹಾರ ಘೋಷಣೆ ಮಾಡುವುದಕ್ಕೆ ಒತ್ತಾಯಿಸುತ್ತೇನೆ. ಜಿಲ್ಲಾಧಿಕಾರಿಗಳಿಗೂ ಕೂಡ ನಿಮ್ಮ ಜೊತೆಗೆ ಇನ್ನೊಂದು ಸಭೆ ನಡೆಸಲು ತಿಳಿಸುತ್ತೇನೆ. ಈಗ ನೀವು ಈ ಧರಣಿ ಸತ್ಯಾಗ್ರಹ ಕೈ ಬಿಡಬೇಕು ಎಂದು ಕೇಳಿಕೊಂಡರು. ಆದರೆ ಈ ಭರವಸೆಯನ್ನು ಒಪ್ಪದ ರೈತರು ಬೆಲೆ ನಿಗದಿಗೊಳಿಸಿದ ಆದೇಶ ಬರುವವರೆಗೂ ನಾವು ಧರಣಿ ಕೈ ಬಿಡುವುದಿಲ್ಲ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ಮುಂದುವರೆಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.







