Bidar | ನಗರದ ವಿವಿಧ ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ಅಧಿಕಾರಿಗಳ ದಿಢೀರ್ ಭೇಟಿ: ಪರಿಶೀಲನೆ

ಬೀದರ್: ನಗರದಲ್ಲಿ ಕಳಪೆ ಮತ್ತು ಅಸುರಕ್ಷಿತ ಆಹಾರ ಮಾರಾಟ ಮಾಡುತ್ತಿರುವ ಹೋಟೆಲ್‌ಗಳ ಮೇಲೆ ಸಹಾಯಕ ಆಯುಕ್ತ ಮಹಮ್ಮದ್ ಶಕೀಲ್ ಅವರ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡವು ನಗರದ ವಿವಿಧ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಹೋಟೆಲ್ ಆಮಂತ್ರಣ ಮತ್ತು ನ್ಯೂ ಆಶೀರ್ವಾದ ಹೋಟೆಲ್‌ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಮಿಸ್ ಬ್ರಾಂಡೆಡ್ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಹೋಟೆಲ್ ಉಡುಪಿ ಕಾರಂತ್, ಪಂಜಾಬಿ ತಡ್ಕಾ, ಮಯೂರ, ರಾಯಲ್ ಅನ್‌ಮೋಲ್ ಮತ್ತು ಖಾನ್ ಚಾಚಾ ಹೋಟೆಲ್‌ಗಳಲ್ಲಿ ಅಡುಗೆ ಮನೆಗಳು ತೀವ್ರ ಅಸ್ವಚ್ಛತೆ ಇತ್ತು. ಆಹಾರದಲ್ಲಿ ಕೃತಕ ಬಣ್ಣ ಮತ್ತು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಶಂಕೆಯ ಮೇರೆಗೆ ಹೋಟೆಲ್ ಮಯೂರದಿಂದ ಪನೀರ್ ಹಾಗೂ ಕಡಲೆಹಿಟ್ಟು, ಖಾನ್ ಚಾಚಾ ಹೋಟೆಲ್‌ನಿಂದ ಮೆಣಸಿನ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ರಾಯಲ್ ಅನ್‌ಮೋಲ್ ಮತ್ತು ಮಂದಿ ಕಿಂಗ್ ಹೋಟೆಲ್‌ಗಳಿಂದಲೂ ಶಂಕಾಸ್ಪದ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಲ್ಯಾಬ್ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಆಹಾರ ವ್ಯಾಪಾರಿಗಳು ಕಡ್ಡಾಯವಾಗಿ ನೈರ್ಮಲ್ಯ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಮುಂಬರುವ ದಿನಗಳಲ್ಲೂ ಇಂತಹ ವಿಶೇಷ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2026ರ ನಿಯಮಗಳನ್ನು ಉಲ್ಲಂಘಿಸಿದ ಹಲವು ಪ್ರಮುಖ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಮನೋಹರ್ ಅಳಶೆಟ್ಟಿ, ಸೋಮನಾಥ್ ತರನಳ್ಳಿ, ಅಶ್ವಿನಿ ಗಾಳೆ ಹಾಗೂ ಕಿಶೋರ್ ಕುಮಾರ್ ಭಾಗವಹಿಸಿದ್ದರು.






