ಬೀದರ್ | ನಾರಂಜಾ ಕಾರ್ಖಾನೆ ಚುನಾವಣೆಯಲ್ಲಿ ಸೂರ್ಯಕಾಂತ್ ನಾಗಮಾರಪಳ್ಳಿ ಪೆನಾಲ್ ಗೆ ಜಯ

ಬೀದರ್ : ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ ಎಸ್ ಎಸ್ ಕೆ) ಯ ಆಡಳಿತ ಮಂಡಳಿಯ 2025-30 ನೇ ಸಾಲಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡ ಸೂರ್ಯಕಾಂತ್ ನಾಗಮಾರಪಳ್ಳಿ ಪೆನಾಲ್ ಗೆ ಜಯ ಲಭಿಸಿದೆ.
ಗುರುವಾರ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ನಡೆದಿತ್ತು. ಒಟ್ಟು 13 ಸ್ಥಾನಗಳಲ್ಲಿ 4 ಸ್ಥಾನಕ್ಕೆ ಸೂರ್ಯಕಾಂತ್ ನಾಗಮಾರಪಳ್ಳಿ ಪೆನಾಲ್ ನ ನಾಲ್ಕು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎಲ್ಲ ಸ್ಥಾನಗಳಲ್ಲೂ ಕೂಡ ಸೂರ್ಯಕಾಂತ್ ನಾಗಮಾರಪಳ್ಳಿ ಅವರ ಪೆನಾಲ್ ನ ಸದಸ್ಯರು ಆಯ್ಕೆಯಾಗಿದ್ದಾರೆ.
ಒಟ್ಟು 4,438 ಮತದಾರರಲ್ಲಿ 3,015 ಮತದಾನ ಚಲಾಯಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಸೂರ್ಯಕಾಂತ್ ನಾಗಮಾರಪಳ್ಳಿ, ಕುಶಾಲರಾವ್ ಯಾಬಾ, ಬಾಲಾಜಿ ಚೌವ್ಹಾಣ್, ಸಂಗಮೇಶ್ ಪಾಟೀಲ್, ಸಂಜು ಸಿದ್ದಾಪುರೆ ಜಯ ಗಳಿಸಿದ್ದರೆ, ಪ್ರವರ್ಗ (ಎ) ಯಿಂದ ಸಿದ್ರಾಮ್ ವಾಘಮಾರೆ, ಪ್ರವರ್ಗ(ಬಿ) ಯಿಂದ ರಾಜಕುಮಾರ್ ಕರಂಜಿ, ಪರಿಶಿಷ್ಟ ಜಾತಿಯಿಂದ ಚಂದ್ರಕಾಂತ್ ಹಿಪ್ಪಳಗಾಂವ್ ಹಾಗೂ ಪರಿಶಿಷ್ಟ ಪಂಗಡದಿಂದ ವಿಜಯಕುಮಾರ್ ಪಾಟೀಲ್ ಅವರು ಜಯ ಗಳಿಸಿದ್ದಾರೆ.





