ಬೀದರ್ | ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಯಿಂದ ದಾಳಿ; ಹೆಚ್ಚಿನ ಡೋಸ್ ಹೊಂದಿದ ಔಷಧಿ ವಶಕ್ಕೆ

ಬೀದರ್ : ಔರಾದ್ ತಾಲ್ಲೂಕಿನ ಜಮಗಿ ಗ್ರಾಮದಲ್ಲಿ ಇಬ್ಬರು ನಕಲಿ ವೈದ್ಯರ ಕ್ಲಿನಿಕ್ ಮೇಲೆ ಔರಾದ್ ತಾಲೂಕು ವೈದ್ಯಾಧಿಕಾರಿ ಗಾಯತ್ರಿ ಅವರು ದಾಳಿ ನಡೆಸಿ, ಅಲ್ಲಿರುವ ಹೆಚ್ಚಿನ ಡೋಸ್ ನ ಔಷಧಿಗಳು ವಶಕ್ಕೆ ಪಡೆದು, ಎರಡು ಕ್ಲಿನಿಕ್ ಗಳನ್ನು ಮುಟ್ಟುಗೋಲು ಹಾಕಿಕೊಂಡು ಕೆಪಿಎಂಇ ಅಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಜಮಗಿ ಗ್ರಾಮದಲ್ಲಿ ಒರ್ವರು ಆರ್‌ಎಂಪಿ ಮತ್ತು ಇನ್ನೊರ್ವರು ಬಿಎಂಎಸ್ ಮಾಡಿದವರು ತಮ್ಮದೇಯಾದ ಕ್ಲಿನಿಕ್ ನಡೆಸುತ್ತಿದ್ದರು. ಆರ್‌ಎಂಪಿ ನವರದ್ದು ಪಿಯುಸಿ ಶಿಕ್ಷಣ ಅಷ್ಟೇ ಮುಗಿಸಿದ್ದಾರೂ ಕೂಡ ತಮ್ಮದೇಯಾದ ಕ್ಲಿನಿಕ್ ನಡೆಸುತ್ತಿದ್ದರು. ಬಿಎಂಎಸ್ ಮಾಡಿದವರು ರೆಜಿಸ್ಟ್ರೇಷನ್ ಮಾಡಿರಲಿಲ್ಲ. ಹಾಗೆಯೇ ಇಬ್ಬರ ಫಾರ್ಮಸಿಯಲ್ಲಿಯೂ ಕೂಡ ಹೈಡೋಸ್ ಡ್ರಗ್ಸ್ ಇದ್ದವು ಎಂದು ವೈದ್ಯಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.
ಹೈಡೋಸ್ ಡ್ರಗ್ಸ್ ಗಳು ಫಾರ್ಮಸಿಯಲ್ಲಿ ಇರಬಾರದು. ಇದು ನಶೆ ಮಾಡುವುದಕ್ಕೂ ಬಳಸುತ್ತಾರೆ. ಇದರಿಂದಾಗಿ ಅನೇಕ ಅಡ್ಡ ಪರಿಣಾಮ ಬೀರಬಹುದು. ಇತ್ತೀಚಿಗೆ ಹೃದಯ ರೋಗಗಳು ಹೆಚ್ಚುತ್ತಿರುವುದಕ್ಕೆ ಇಂಥ ನಕಲಿ ವೈದ್ಯರು ಕೂಡ ಕಾರಣವಾಗಿದ್ದಾರೆ. ಹಾಗೆಯೇ ಹೈಡೋಸ್ ಡ್ರಗ್ಸ್ ಗಳು ಯುವಕರು ನಶೆ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂಥಹ ನಕಲಿ ವೈದ್ಯರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದೀಗ ಜಮಗಿಯ ಇಬ್ಬರು ನಕಲಿ ವೈದ್ಯರ ವಿರುದ್ಧ ಕೆಪಿಎಂಇ ಅಲ್ಲಿ ಪ್ರಕರಣ ದಾಖಲಾಗಿದ್ದು, ಮುಂದೆಯೂ ಕೂಡ ಇಂಥಹ ನಕಲಿ ವೈದ್ಯರ ಮೇಲೆ ದಾಳಿ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಮ್ಮ ಕೆಲಸ ಮುಂದಿವರೆಯುತ್ತದೆ ಎಂದು ಅವರು ಹೇಳಿದ್ದಾರೆ.







