Bidar | ಸಮಾಜ, ರಾಜಕಾರಣ ಅರಿಯಲು ಅಧ್ಯಾಪಕರ ಮಾರ್ಗದರ್ಶನ ಅಗತ್ಯ: ಡಾ.ಭೀಮಾಶಂಕರ್ ಬಿರಾದಾರ್

ಬೀದರ್: ಮನುಷ್ಯನಲ್ಲಿ ಸಹಜವಾಗಿರುವ ಕಲಿಕೆಗೆ ಮಾತ್ರ ಅಧ್ಯಾಪಕ ಅಗತ್ಯವಿಲ್ಲ. ಸಮಾಜವನ್ನು ಗ್ರಹಿಸಲು, ರಾಜಕಾರಣವನ್ನು ಅರ್ಥಮಾಡಿಕೊಳ್ಳಲು ಹಾಗೂ ಸಾಂಸ್ಕೃತಿಕ ಅರಿವು ಮೂಡಿಸಿಕೊಳ್ಳಲು ಅಧ್ಯಾಪಕರ ಮಾರ್ಗದರ್ಶನ ಅಗತ್ಯ ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜಿನ ಅಧ್ಯಾಪಕ ಡಾ. ಭೀಮಾಶಂಕರ್ ಬಿರಾದಾರ್ ಹೇಳಿದರು.
ಬಸವಕಲ್ಯಾಣ ನಗರದ ಎಸ್‌ಎಸ್‌ಕೆಬಿ ಕಾಲೇಜಿನಲ್ಲಿ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಲೋಕದ ವ್ಯವಹಾರಗಳು ಹಾಗೂ ಪ್ರಕೃತಿಯ ಸಂಗತಿಗಳನ್ನು ಗ್ರಹಿಸುವ ಅರಿವಿನ ನೋಟವನ್ನು ನೀಡುತ್ತಾರೆ. ತರಗತಿ ಕೋಣೆಯಲ್ಲಿ ಪ್ರಜಾಪ್ರಭುತ್ವದ ವಾತಾವರಣವಿದ್ದರೆ, ಅಲ್ಲಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಹಾಗೂ ಸಮಾನತೆಯ ಪರಿಕಲ್ಪನೆಗಳು ಗಟ್ಟಿಯಾಗುತ್ತವೆ. ಸಂಶೋಧನೆಯ ಹಿಂದಿನ ಶ್ರಮ ಹಾಗೂ ಸಿದ್ಧಾಂತದ ತಾತ್ವಿಕತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಿವಕುಮಾರ್ ಪಾಟೀಲ್ ಮಾತನಾಡಿ, ಭಾರತ ವೈವಿಧ್ಯತೆಯಿಂದ ಕೂಡಿದ ದೇಶವಾಗಿದ್ದು, ಹಲವು ಪಂಥಗಳು ಹಾಗೂ ತತ್ವಗಳನ್ನು ಹೊಂದಿದೆ. ಗುರು ಪರಂಪರೆಗೆ ವಿಶೇಷ ಸ್ಥಾನಮಾನ ಹೊಂದಿರುವ ದೇಶದಲ್ಲಿ ವಿವಿಧ ವಿಚಾರಗಳನ್ನು ವಿಶ್ಲೇಷಿಸಿ ಒಮ್ಮತಕ್ಕೆ ಬರುವ ಪರಂಪರೆಯಿದೆ. ವೈವಿಧ್ಯತೆಯಲ್ಲಿ ಏಕತೆ ಕಾಣುವುದೇ ಭಾರತದ ಸೌಂದರ್ಯ ಎಂದು ಹೇಳಿದರು.
ಭಾರತದಲ್ಲಿ ಆಕ್ರಮಣಶೀಲತೆಗಿಂತ ಶಾಂತಿ ಹಾಗೂ ಸೌಹಾರ್ದತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರ ಮೂಲ ಇಲ್ಲಿನ ಗುರು ಪರಂಪರೆಯಲ್ಲಿದೆ. ಗುರುಗಳು ಕ್ರೌರ್ಯವನ್ನು ಪ್ರಚೋದಿಸುವ ಬದಲು ಸಹನೆ, ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಆದ್ಯತೆ ನೀಡಿದ್ದಾರೆ. ಪಾಠದ ಜತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ತಿಳಿಸುವ ಹೊಣೆಗಾರಿಕೆಯೂ ಶಿಕ್ಷಕರ ಮೇಲಿದೆ ಎಂದರು.
ಸಂವಿಧಾನ ನಮಗೆ ಹಕ್ಕುಗಳನ್ನು ನೀಡುವುದರ ಜತೆಗೆ ಕರ್ತವ್ಯ ಪ್ರಜ್ಞೆಯನ್ನೂ ಬೆಳೆಸಿದೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಸ್ವಾತಂತ್ರ್ಯಪೂರ್ವದಲ್ಲಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುಟುಂಬದಲ್ಲಿ ತಾಯಿ ಮೊದಲ ಗುರುವಾಗಿದ್ದರೆ, ಅಧ್ಯಾಪಕರು ನಂತರದ ಗುರುಗಳಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ಎಚ್.ಆರ್. ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕ ಪ್ರೊ. ವಿಠೋಬಾ ಡೊಣ್ಣೇಗೌಡರ್, ಸೂರ್ಯಕಾಂತ್ ನಾಸೆ, ನಾಗರಾಜ್ ನಿಂಬಾಳ್ಕರ್, ಭಾರತಿ ಮಠ್, ವೈಶಾಲಿ, ಸತೀಶ್ ರಾಥೋಡ್, ಅಶ್ವಿನಿ ಇದ್ದರು. ಐಕ್ಯೂಎಸಿ ಸಂಯೋಜಕ ಡಾ. ವಿಜಯಕುಮಾರ್ ತಳವಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭೀಮಶಂಕರ್ ಪೂಜಾರಿ ನಿರೂಪಿಸಿದರು. ಕಲ್ಯಾಣಪ್ಪ ನಾವದಗಿ ವಂದಿಸಿದರು.






