ಬೀದರ್ | ತಂತ್ರಜ್ಞಾನವನ್ನು ಉತ್ತಮ ಉದ್ದೇಶಗಳಿಗೆ ಬಳಸಬೇಕು : ಸಚಿವ ಈಶ್ವರ್ ಖಂಡ್ರೆ

ಬೀದರ್ : ತಂತ್ರಜ್ಞಾನವನ್ನು ಉತ್ತಮ ಉದ್ದೇಶಗಳಿಗೆ ಬಳಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.
ಇಂದು ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ಗೆ ಪ್ರವೇಶ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ (ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿ) ಉಚಿತ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ತಂತ್ರಜ್ಞಾನವನ್ನು ಹೊಸ ಹೊಸ ಆವಿಷ್ಕಾರ, ದೇಶದ ಪ್ರಗತಿ, ನವ ಸಮಾಜದ ನಿರ್ಮಾಣ ಮಾಡುವಂತಹ ಕಾರ್ಯಗಳಿಗೆ ಬಳಸಬೇಕು. ಇಂದಿನ ಯುಗದಲ್ಲಿ ತಂತ್ರಜ್ಞಾನವು ಅತ್ಯಗತ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ಸಾಧನ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಕಲಿತು ತಮ್ಮ ಭವಿಷ್ಯವನ್ನು ಬಲಪಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸ್ವಾವಲಂಬಿ ಹಾಗೂ ಪ್ರಗತಿಶೀಲ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ , ದಲಿತ ಮಹಾಸಭಾ ಅಧ್ಯಕ್ಷ ಪ್ರದೀಪ್ ಜಂಜಿರೆ, ಪ್ರಾಂಶುಪಾಲ ವಿಜಯಕುಮಾರ್ ಎಸ್.ಜಾಧವ್ ಹಾಗೂ ದೇವೇಂದ್ರ ಹಂಚೆ ಸೇರಿದಂತೆ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







