ಬೀದರ್ | ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ವಿರೂಪಗೊಳಿಸಿದ ದುಷ್ಕೃತ್ಯ ಖಂಡನೀಯ : ಪಿಂಟು ಕಾಂಬಳೆ

ಬೀದರ್ : ಚಿತ್ತಾಪುರದ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಖಂಡನೀಯವಾಗಿದೆ ಎಂದು ಡಿಎಸ್ಎಸ್ (ಪ್ರೊ.ಬಿ. ಕೃಷ್ಣಪ್ಪ) ಬಸವಕಲ್ಯಾಣ ತಾಲೂಕು ಸಂಚಾಲಕ ಪಿಂಟು ಕಾಂಬಳೆ ಹೇಳಿದ್ದಾರೆ.
ಅಂಬಿಗರ ಚೌಡಯ್ಯರು 12ನೇ ಶತಮಾನದಲ್ಲಿ ವಚನ ಕ್ರಾಂತಿಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾನ್ ವಚನಕಾರರಾಗಿದ್ದರು. ಆದರೆ, ವಿಕೃತ ಮನೋಭಾವದ ಕೆಲವರು ಅವರ ಪ್ರತಿಮೆಗೆ ಹಾನಿ ಮಾಡುವ ಮೂಲಕ ಭವ್ಯ ಪರಂಪರೆಯನ್ನು ಅವಮಾನಿಸಿದ್ದಾರೆ.
ಅಂಬಿಗರ ಚೌಡಯ್ಯರನ್ನು ಅವಮಾನಿಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಮತ್ತು ಮಹಾತ್ಮರ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Next Story





