Bidar | ಯುವಜನರಿಗೆ ಕಿತ್ತೂರು ರಾಣಿ ಚೆನ್ನಮ್ಮನ ಜೀವನವೇ ಪ್ರೇರಣಾಶಕ್ತಿ : ಭಾಗ್ಯವತಿ

ಬೀದರ್: ಇಂದಿನ ಯುವಜನತೆ (ಜೆನ್ಝಿ) ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಈ ಸಾಧನೆಗೆ ಇನ್ನಷ್ಟು ಬಲ ತುಂಬಲು ಆತ್ಮವಿಶ್ವಾಸ, ಸ್ವಾಭಿಮಾನ, ಸ್ವಾವಲಂಬನೆ, ಗಟ್ಟಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆ ಅಗತ್ಯ. ಈ ಎಲ್ಲ ಗುಣಗಳಿಗೆ ಕಿತ್ತೂರು ರಾಣಿ ಚೆನ್ನಮ್ಮನ ಜೀವನವೇ ಪ್ರೇರಣಾಶಕ್ತಿಯಾಗಿದೆ ಎಂದು ತಾಲೂಕಿನ ಘೋಡಂಪಳ್ಳಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಭಾಗ್ಯವತಿ ಹೇಳಿದರು.
ನಗರದ ಬಿವಿಬಿ ಕಾಲೇಜು ರಸ್ತೆಯ ಚೆನ್ನಮ್ಮ ವೃತ್ತದ ಬಳಿ ಮಂಗಳವಾರ ನಡೆದ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮನಂತಹ ಆದರ್ಶ ಮತ್ತೊಬ್ಬರು ಸಿಗಲಾರರು. ಚೆನ್ನಮ್ಮನ ಬದುಕೇ ಸ್ತ್ರೀ ಸಬಲೀಕರಣದ ನೈಜ ಪಾಠವಾಗಿದೆ. ಮಹಿಳೆಯರಲ್ಲಿ ಅಪಾರ ಶಕ್ತಿ ಮತ್ತು ಸಾಮರ್ಥ್ಯವಿದೆ. ಅದನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಮೇಲೆ ದೇಶದ ಅಭಿವೃದ್ಧಿ ಅವಲಂಬಿಸಿದೆ ಎಂಬ ಸ್ವಾಮಿ ವಿವೇಕಾನಂದರ ಮಾತು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದರು.
ಸ್ವಾಭಿಮಾನ, ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಕಿಚ್ಚಿನೊಂದಿಗೆ ಹೋರಾಡಿದ ಚೆನ್ನಮ್ಮ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ವೀರ ವನಿತೆಯಾಗಿದ್ದರು. ದೇಶ, ಧರ್ಮ ಮತ್ತು ಸಮಾಜಕ್ಕಾಗಿ ಉಸಿರಿರುವವರೆಗೂ ಹೋರಾಡಿದ ಚೆನ್ನಮ್ಮನ ಜೀವನವೇ ದೊಡ್ಡ ಪ್ರೇರಣೆ. ಇಂದಿನ ಯುವಕರು, ವಿಶೇಷವಾಗಿ ಮಹಿಳೆಯರು, ಅವರ ಇತಿಹಾಸವನ್ನು ಓದಿ ಸ್ಫೂರ್ತಿ ಪಡೆಯಬೇಕು ಎಂದು ಕರೆ ನೀಡಿದರು.
ಬಸವನಗರ ಮಹಿಳಾ ಮಂಡಳದ ಅಧ್ಯಕ್ಷೆ ರತ್ನಾ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆನ್ನಮ್ಮ ಸ್ತ್ರೀಯಾಗಿ, ತಾಯಿಯಾಗಿ ಹಾಗೂ ರಾಜಮಾತೆಯಾಗಿ ಮಾಡಿದ ಕಾರ್ಯಗಳು ಅವಿಸ್ಮರಣೀಯ. ದತ್ತುಪುತ್ರನ ಹಕ್ಕನ್ನು ಪ್ರಶ್ನಿಸಿದ ಬ್ರಿಟಿಷರ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ್ದು ಕೇವಲ ತಾಯಿಯ ಹೋರಾಟವಾಗಿರಲಿಲ್ಲ; ಅದು ದೇಶದ ಅಸ್ಮಿತೆ ಮತ್ತು ಗೌರವದ ಹೋರಾಟವಾಗಿತ್ತು. ಭಾರತದ ಇತಿಹಾಸದಲ್ಲಿ ಸ್ತ್ರೀಶಕ್ತಿಯೇ ರಾಷ್ಟ್ರಶಕ್ತಿಯಾಗಿ ರೂಪುಗೊಂಡಿರುವುದನ್ನು ಕಾಣಬಹುದು ಎಂದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ವಿನೋದ್ ಅಪ್ಪೆ, ಎನ್ಜಿಒ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಾಲಾಜಿ ಬಿರಾದಾರ್ ಹಾಗೂ ಜಯಂತಿ ಸಮಿತಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು.
ಜಯಂತಿ ಸಮಿತಿ ಅಧ್ಯಕ್ಷ ಶರಣಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಸಂತೋಷಿ ಮತ್ತು ಪ್ರೀತಿ, ಪ್ರಮುಖರಾದ ರಾಜಶೇಖರ್ ಪಾಟೀಲ್, ಬಲಭೀಮ್ ಬೆಟ್ಟದ್, ಭಾರತಿ ವಸ್ತ್ರದ್, ಸುನೀತಾ ಭಾಲ್ಕೆ, ಚಿತ್ರನಟಿ ನೇಹಾ ಮೂಲಗೆ ಹಾಗೂ ಸಂಗಮೇಶ್ ಮೋರ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶರಣಯ್ಯ ಸ್ವಾಮಿ ಸ್ವಾಗತಿಸಿದರು. ವೀಣಾ ಮಾಶೆಟ್ಟಿ ನಿರೂಪಿಸಿದರು. ಸಂಜನಾ ಪಾಟೀಲ್ ವಂದಿಸಿದರು.






