ಬೀದರ್ | ಅರಣ್ಯ ಪ್ರದೇಶ ಹೆಚ್ಚಿಸುವುದೇ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಜೇಷನ್ ಸಂಘಟನೆಯ ಮುಖ್ಯ ಗುರಿ : ಅನ್ವರಿ ಬೇಗಂ

ಬೀದರ್ : ದೇಶದಲ್ಲಿ ಶೇ.24 ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ.33 ಕ್ಕೆ ಹೆಚ್ಚಿಸುವ ಗುರಿಯು ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಜೇಷನ್ ಸಂಘಟನೆ ಇಟ್ಟುಕೊಂಡಿದೆ ಎಂದು ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಜEಷನ್ ನ ಸಂಚಾಲಕಿ ಅನ್ವರಿ ಬೇಗಂ ಅವರು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಬೀದರ್ ಘಟಕ ಹಾಗೂ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಜೇಷನ್ ವತಿಯಿಂದ ನಗರದ ಡೀಸೆಂಟ್ ಫಂಕ್ಷನ್ ಹಾಲ್‍ನಲ್ಲಿ ಆಯೋಜಿಸಿದ್ದ ಸಸಿ ನೆಡುವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘಟನೆಯಿಂದ ಜೂ.25 ರಂದು ದೇಶದಾದ್ಯಂತ 10 ಲಕ್ಷ ಸಸಿ ನೆಡುವ ಅಭಿಯಾನ ಆರಂಭಿಸಲಾಗಿದ್ದು, ಈ ಅಭಿಯಾನ ಜು. 25ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸಂಚಾಲಕ ಡಾ.ಇರ್ಷಾದ್ ನವೀದ್ ಅವರು ಮಾತನಾಡಿ, 'ಮಣ್ಣಿನಲ್ಲಿ ಕೈಗಳು-ತಾಯ್ನಾಡಿನೊಂದಿಗೆ ಹೃದಯ’ ಎಂಬುದು ಈ ಅಭಿಯಾನದ ಘೋಷವಾಕ್ಯವಾಗಿದೆ. ಹೊಸ ಪೀಳಿಗೆಗೆ ತಾಯ್ನಾಡು ಹಾಗೂ ಮಣ್ಣಿನ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಲು ಪ್ರೇರಣೆ ನೀಡುವುದು ಈ ಘೋಷವಾಕ್ಯದ ಉದ್ದೇಶವಾಗಿದೆ ಎಂದು ಹೇಳಿದರು.
ಮಕ್ಕಳಾದ ಶೇಕ್ ರಾಯನ್ ಅಹಮ್ಮದ್, ಸೈಯದ್ ಆರೀಬ್ ರೆಜಾ, ಸೈಯದ್ ಮುಂಜಾ ಅನಮ್, ಮೆಹ್ರೂಜ್ ಅಫಿಯಾ ಅರುಷ್, ಅರೀಬಾ ತಮ್ಮ ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಎ.ರೆಹಾನ್ ಕುರಾನ್ ಪಠಣ ಮಾಡಿದರು. ಈ ಸಮಯದಲ್ಲಿ ಅರಣ್ಯ ಇಲಾಖೆ ವತಿಯಿಂದ 200 ಮಾವು, ಪೇರಲ, ನೇರಳೆ ಹಾಗೂ ಕರಿಬೇವು ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಮೊಅಜ್ಂ, ಉಪಾಧ್ಯಕ್ಷ ಮುಹಮ್ಮದ್ ಆರಿಫುದ್ದೀನ್, ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ವಿಜ್ಡಂ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಮುಹಮ್ಮದ್ ಆಸಿಫುದ್ದೀನ್, ಮೌಲಾನಾ ಮೋನಿಸ್ ಕಿರ್ಮಾನಿ, ಮುಹಮ್ಮದ್ ಸಿರಾಜ್ ನೆಲವಾಡ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಸಹಾಯಕ ಮಾಧ್ಯಮ ಉಸ್ತುವಾರಿ ಸೈಯದ್ ಅತಿಕುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







