ಬೀದರ್ | ರೈತರ ಖಾತೆಗೆ ಪರಿಹಾರ ಹಣ ಪಾವತಿ ಪ್ರಕ್ರಿಯೆ ಆರಂಭಿಸಲಾಗಿದೆ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ರೈತರ ಖಾತೆಗೆ ಪರಿಹಾರ ನೀಡುವ ಕಾರ್ಯ ಪ್ರಕ್ರಿಯೆ ಆರಂಭವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಅ.30 ರ ಒಳಗಾಗಿ ರೈತರಿಗೆ ಪರಿಹಾರ ಹಣ ಒದಗಿಸುವುದಾಗಿ ಪ್ರಯತ್ನ ಮಾಡುವುದಾಗಿ ನಾನು ಹೇಳಿಕೆ ಕೊಟ್ಟಿದ್ದೇನೆ. ನಾನು ಕೊಟ್ಟ ಮಾತಿನಂತೆ ಜಿಲ್ಲಾಡಳಿತ ಹಗಲಿರುಳು ಶ್ರಮಪಟ್ಟು ಕಾಲ ಮಿತಿಯಲ್ಲಿ ಸಮೀಕ್ಷೆ ಮಾಡಿ, ರೈತರ ಸರ್ವೇ ನಂಬರ್ ಮತ್ತು ಗ್ರಾಮವಾರು ಸಮೀಕ್ಷೆ ಮಾಡಿ ಪ್ರಸ್ತಾವನೆ ಸಲ್ಲಿಸಿ, ನಿನ್ನೆಯಿಂದ ರೈತರ ಖಾತೆಗೆ ಹಣ ಜಮೆ ಮಾಡುವ ಕೆಲಸ ಪ್ರಾರಂಭ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಜೂನ್-ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಿದ್ದು, ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಅಧಿಕ ಮಳೆಯಿಂದಾಗಿದೆ. ಬೆಳೆ, ಮನೆ ಪ್ರಾಣಿ, ಮೂಲಭೂತ ಸೌಕರ್ಯಗಳು ಸೇರಿದಂತೆ ಇತರೆ ಹಾನಿಗಳು ಉಂಟಾಗಿದೆ. 1,67,202.78 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ತಿಳಿದಿದ್ದು, ಪರಿಹಾರ ತಂತ್ರಾಂಶದಲ್ಲಿ 1,68,653.94 ಹೆಕ್ಟೇರ್ ಪ್ರದೇಶ ಬೆಳೆ ಹಾನಿ ದಾಖಲಿಸಲಾಗಿದೆ ಎಂದು ಹೇಳಿದರು.
ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಅಡಿ ಪ್ರಕಾರ 143.34 ಕೋಟಿ ರೂ. ಪರಿಹಾರ ಆಗುತ್ತದೆ. ಪ್ರಥಮ ಹಂತವಾಗಿ ಎಸ್ ಡಿ ಆರ್ ಎಫ್ ಮಾನದಂಡದ ಪ್ರಕಾರ ಹಣ ಪಾವತಿಯಾಗುತ್ತಿದೆ. 143.34 ಕೋಟಿ ರೂ. ಮಂಜೂರಾತಿಯಾಗಿದೆ. ಗುರುವಾರ 17.25 ಕೋಟಿ ರೂ. ಬಿಡುಗಡೆಯಾಗಿ ಇಂದು ಸಾಯಂಕಾಲದ ವರೆಗೆ ರೈತರ ಖಾತೆಗೆ ಹಣ ಜಮಾವಣೆಯಾಗುತ್ತದೆ. 61.34 ಕೋಟಿ ರೂ. ಇವತ್ತು ನಮ್ಮ ಪಿಡಿ ಖಾತೆಯಲ್ಲಿ ಹಣ ಜಮೆ ಇದೆ. ಎಲ್ಲ ಕೂಡಿ ಇವತ್ತಿನಿಂದ ಮೂರು ದಿವಸಗಳ ಒಳಗಾಗಿ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹೆಚ್ಚುವರಿ ಪ್ರತಿ ಹೇಕ್ಟರ್ 8,500 ರೂ. ಹಣವನ್ನು ಕೂಡ 15 ದಿನಗಳಲ್ಲಿ ರೈತರಿಗೆ ಪಾವತಿ ಮಾಡಲಾಗುವುದು. ಎಲ್ಲ ಸೇರಿದರೆ ಒಟ್ಟು ಸುಮಾರು 275 ರಿಂದ 300 ಕೋಟಿ ರೂ. ರೈತರಿಗೆ ನೀಡುವ ಪರಿಹಾರ ಹಣವಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯಲ್ಲಿ 4 ಲಕ್ಷ 32 ಸಾವಿರ ಹೆಕ್ಟರ್ ಭೂ ಪ್ರದೇಶ ಬಿತ್ತಣಿಕೆಯಾಗಿತ್ತು. ಅದರಲ್ಲಿ 1 ಲಕ್ಷ 69 ಸಾವಿರ ಹೆಕ್ಟರ್ ಭೂಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. 3 ಮಾನವ ಪ್ರಾಣಹಾನಿಯಾಗಿದ್ದು 15 ಲಕ್ಷ ರೂ. ಅವರಿಗೆ ಪರಿಹಾರ, 62 ಪ್ರಾಣಿಗಳ ಜೀವ ಹಾನಿಯಾಗಿದ್ದು, 16 ಲಕ್ಷ 82 ಸಾವಿರ ರೂ. ಪರಿಹಾರ, 1502 ಮನೆ ಹಾನಿಯಾಗಿದ್ದು ಇದಕ್ಕೆ 2 ಕೋಟಿ 69 ಲಕ್ಷ 44 ಸಾವಿರ ರೂ. ಪರಿಹಾರ ನೀಡಿದ್ದೇವೆ ಎಂದರು.
ಜೆಸ್ಕಾಂನಲ್ಲಿ 1846 ಕಂಬ ಹಾಗೂ 267 ಟ್ರಾನ್ಸಫಾರ್ಮರ್, 148.4 ಕಿ. ಮೀ ವಿದ್ಯುತ್ ತಂತಿ ಹಾನಿಯಾಗಿದ್ದು, ಇದಕ್ಕೆ 4 ಕೋಟಿ 33 ಲಕ್ಷ 49 ಸಾವಿರ ರೂ. ಖರ್ಚು ಮಾಡಲಾಗಿದೆ. ಹಾಗೆಯೇ ಸಣ್ಣ ನೀರಾವರಿ, ಅಂಗನವಾಡಿ ಕೇಂದ್ರ, ಲೋಕೋಪಯೋಗಿ, ನಗರದ ರಸ್ತೆ, ಶಾಲೆಗಳು, ಆರೋಗ್ಯ ಇಲಾಖೆ ಸೇರಿದಂತೆ ಒಟ್ಟು 169.51 ಕೋಟಿ ರೂ. ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಬೆಳೆ ಹಾಗೂ ಮೂಲಭೂತ ಸೌಕರ್ಯ ಎಲ್ಲ ಕೂಡಿ ಒಟ್ಟು 672 ಕೋಟಿ 16 ಲಕ್ಷ ರೂ. ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಮಾನವ ಪ್ರಾಣಹಾನಿ, ಪ್ರಾಣಿಗಳ ಜೀವ ಹಾನಿ, ಮನೆ ಹಾನಿಗಾಗಿ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಅಡಿಯಲ್ಲಿ 301.26 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಜಿಲ್ಲೆಯಲ್ಲಿ ಪರಿಹಾರ ಪಾವತಿ ಇತರ ಜಿಲ್ಲೆಗಳಿಗಿಂತ ಮುಂಚಿತವಾಗಿಯೇ ನೀಡಲಾಗುತ್ತಿದೆ. ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಸುಮಾರು 2,04,019 ಪ್ರಸ್ತಾವನೆಗಳನ್ನು ಪಿ ಎಂ ಎಫ್ ಬಿ ವಾಯ್ ಯೋಜನೆಯಡಿಯಲ್ಲಿ ನೊಂದಾಯಿಸಲಾಗಿದ್ದು, ಒಟ್ಟು 1,22,061 ಹೆಕ್ಟೇರ್ ಪ್ರದೇಶ ಬೆಳೆ ವಿಮೆಯಡಿ ನೋಂದಾಯಿತವಾಗಿದೆ. ಸೋಯಾ, ಉದ್ದು ಖರೀದಿ ಕೇಂದ್ರಗಳು ಸ್ಥಾಪಿಸಲಾಗಿದ್ದು, ಗುಣಮಟ್ಟದ ಸಮಸ್ಯೆಯಿಂದ ತೊಂದರೆ ಉಂಟಾಗುತ್ತಿದೆ. ಕೃಷಿ ಸಚಿವರ ಜತೆ ಚರ್ಚಿಸಿ ಸಮಸ್ಯೆ ನಿವಾರಿಸಲಾಗುವುದು ಎಂದು ತಿಳಿಸಿದ ಅವರು, ಬ್ರೀಮ್ಸ್ ಆಸ್ಪತ್ರೆಯ ನೆಲ ಮಹಡಿಯಲ್ಲಿ ನೀರು ಹೊರ ಹಾಕುವ ಪ್ರಯತ್ನ ಮಾಡಿಲ್ಲ. 40 ವೈದ್ಯರ ನೇಮಕಾತಿ, ವಜಾ, ಸಂಬಳಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.







