Bidar | ವಿಶೇಷ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ರಾಜಕುಮಾರ್ ಧುಮ್ಮನ್ಸೂರ್

ಬೀದರ್: ದೇಶಕ್ಕೆ ದೊರೆತ ಸ್ವಾತಂತ್ರ್ಯವು ಅನೇಕ ಮಹನೀಯರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಅನಿಲಕುಮಾರ್ ಬೇಲ್ದಾರ್ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಕಲ್ಚರಲ್ ಮತ್ತು ವೆಲ್‌ಫೇರ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ನವಜೀವನ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಬಿ-ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ರಾಜಕುಮಾರ್ ಧುಮ್ಮನ್ಸೂರ್ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಹಾಗೂ ಗೌರವ ದೊರೆಯಬೇಕು. ವಿಶೇಷ ಮಕ್ಕಳನ್ನು ಕರುಣೆಯಿಂದ ನೋಡುವ ಬದಲು, ಅವರಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ವಿಶೇಷ ಮಕ್ಕಳಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಆತ್ಮವಿಶ್ವಾಸ ಬೆಳೆಸುವ ಅವಕಾಶಗಳನ್ನು ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.
ಶೈಲ್ಲಾ ಧುಮ್ಮನ್ಸೂರ್ ಮಾತನಾಡಿ, ವಿಶೇಷ ಮಕ್ಕಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ, ಅವರೊಂದಿಗೆ ಕಾಳಜಿ ಹಾಗೂ ಪ್ರೀತಿಯಿಂದ ನಡೆದುಕೊಳ್ಳಬೇಕು. ಪ್ರತಿಯೊಬ್ಬರೂ ದೇಶ ಸೇವೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ನವೀನ್ ವಲ್ಲಾಪೂರೆ ಹಾಗೂ ವಿಶೇಷ ಮಕ್ಕಳ ಮುಖ್ಯಗುರು ಸಂತಷ್ ಸುವರ್ಣಕರ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೀನಾ ಸ್ವಾಗತ ಗೀತೆ ಹಾಡಿದರು. ವಿಜಯಲಕ್ಷ್ಮೀ ನಾಗೂರೆ ನಿರೂಪಿಸಿದರು. ರೇಣುಕಾ ತಾಂದಳೆ ವಂದಿಸಿದರು.






