ಬೀದರ್ | ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ; 22 ಆರೋಪಿಗಳ ಬಂಧನ

ಬೀದರ್ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಗಳಲ್ಲಿ ನಡೆದ ಕಳ್ಳತನ ಪ್ರಕರಣಗಕ್ಕೆ ಸಂಬಂಧಿಸಿದಂತೆ ಮುದ್ದೆ ಮಾಲಿನ ಜೊತೆಗೆ ಕಳ್ಳರನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯಾ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಕಳ್ಳತನ ಪ್ರಕರಣಗಳನ್ನು ಭೇಧಿಸಿ ಸ್ವತ್ತಿನ ಜೊತೆಗೆ ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕುರಿ ಕಳ್ಳತನ, ಮನೆ ಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನದ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಗಳು ಭೇಧಿಸಿ, ಒಟ್ಟು 6,82,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು 4 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಗಾಂಧಿ ಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕಳ್ಳತನದ ಎರಡು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಒಟ್ಟು 11,73,800 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾಂಠಾಳ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದ್ದ ಪ್ರಕರಣ ಒಂದರಲ್ಲಿ ಒಟ್ಟು 4 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಿ, 4 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಖಟಕ್ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 5 ಆಡು ಕಳ್ಳತನ ಪ್ರಕರಣದಲ್ಲಿ 5 ಲಕ್ಷ ಬೆಲೆ ಬಾಳುವ 1 ಸ್ವಿಫ್ಟ್ ಕಾರು ಹಾಗೂ 68 ಸಾವಿರ ರೂ. ವಶಕ್ಕೆ ಪಡೆದು, 4 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಧನ್ನೂರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಟಿಪ್ಪರ್ ಕಳ್ಳತನ ಪ್ರಕರಣದಲ್ಲಿ 4 ಲಕ್ಷ 50 ಸಾವಿರ ರೂ. ಬೆಲೆ ಬಾಳುವ ಒಂದು ಟಿಪ್ಪರ್ ವಶಕ್ಕೆ ಪಡೆಯಲಾಗಿದೆ.
ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಚೈನ್ ಮತ್ತು ಉಂಗುರ ಕಿತ್ತುಕೊಂಡು ಪರಾರಿಯಾದ ಪ್ರಕರಣದಲ್ಲಿ ಒಟ್ಟು 1 ಲಕ್ಷ 19 ಸಾವಿರ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದು, 2 ಆರೋಪಿಗಳನ್ನು ಬಂಧಿಸಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪಾತ್ರೆ ಅಂಗಡಿ ಕಳವು ಪ್ರಕರಣದಲ್ಲಿ, 1 ಲಕ್ಷ ಬೆಲೆಬಾಳುವ 1 ಕಾರು, 3 ಲಕ್ಷ ಬೆಲೆ ಬಾಳುವ 1 ಬುಲೆರೋ ವಾಹನ ಮತ್ತು 3 ಲಕ್ಷ ರೂ. ಹೀಗೆ ಒಟ್ಟು 7 ಲಕ್ಷದ ವಸ್ತುಗಳನ್ನು ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೆಯೇ ಮನ್ನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ, 9 ಗ್ರಾಂ ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನ ಒಟ್ಟು 1 ಲಕ್ಷ 2 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.