ಬೀದರ್: ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ; 6 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ

ಬೀದರ್: ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಸೇರಿ ಒಟ್ಟು 6,38,750 ರೂ. ಮೌಲ್ಯದ ಸೊತ್ತು ಜಪ್ತಿ ಮಾಡಿರುವ ಘಟನೆ ಬೀದರ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ನಗರದ ಟಿ. ಮರ್ಜಾಪೂರ್ ಗ್ರಾಮದ ಅರಣ್ಯ ಪ್ರದೇಶದ ಹತ್ತಿರ ಪೊಲೀಸರು ನಿಂತಿದ್ದಾಗ ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಒಂದು ಗೋಣಿ ಚೀಲ ಸಾಗಿಸುತ್ತಿರುವುದು ಕಂಡುಬಂದಿತ್ತು. ಅವರು ಸಾಗಿಸುತ್ತಿದ್ದ ಗೋಣಿ ಚೀಲದ ಬಗ್ಗೆ ವಿಚಾರಿಸಿದಾಗ ಬೀಜದ ಪ್ಯಾಕೆಟ್‌ಗಳು ಇವೆ ಎಂದು ಹೇಳಿದ್ದರು. ಆದರೆ ಪೊಲೀಸರಿಗೆ ಸಂಶಯ ಬಂದು ಚೀಲ ಬಿಚ್ಚಿ ನೋಡಿದಾಗ, ಚೀಲದಲ್ಲಿ ಖಾಕಿ ಬಣ್ಣದ 10 ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.
ಆರೋಪಿಗಳಿಂದ ಸುಮಾರು 5,88,750 ರೂ. ಮೌಲ್ಯದ ಒಟ್ಟು 11 ಕೆ.ಜಿ. 775 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 50 ಸಾವಿರ ರೂ. ಬೆಲೆಬಾಳುವ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕೃತ್ಯದಲ್ಲಿ ಭಾಗವಹಿಸಿದ ಐವರು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.




