Bidar | ಮಾವಿನ ಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಸಹೋದರಿಯರು ಮೃತ್ಯು : ಮತ್ತೋರ್ವ ಸಹೋದರಿಯ ಸ್ಥಿತಿ ಗಂಭೀರ

ಬೀದರ್: ಮಾವಿನ ಹಣ್ಣು ಸೇವಿಸಿ ಸೇವಿಸಿ ಅಸ್ವಸ್ಥರಾಗಿದ್ದ ಬೀದರ್ ಮೂಲದ ಇಬ್ಬರು ಸಹೋದರಿಯರು ಹೈದರಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ಮೂಲದ ಭವಾನಿ ಮೇತ್ರೆ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ಬಾಲಕಿಯರು. ಇವರ ಸಹೋದರಿ ವಿಜಯಶ್ರೀ ಮೇತ್ರೆ (19) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜೂ.8ರಂದು ಕುಟುಂಬ ಸದಸ್ಯರೆಲ್ಲರೂ ಮನೆಯಲ್ಲೇ ಊಟ ಮಾಡಿದ್ದು, ಬಳಿಕ ಸಂಬಂಧಿಕರು ತಂದಿದ್ದ ಮಾವಿನ ಹಣ್ಣುಗಳನ್ನು ಸೇವಿಸಿದ್ದರು ಎನ್ನಲಾಗಿದೆ. ಮಾವಿನ ಹಣ್ಣು ಸೇವಿಸಿದ ಕೆಲವೇ ಸಮಯದಲ್ಲಿ ಕುಟುಂಬದ ಹಲವರಿಗೆ ವಾಂತಿ, ಭೇದಿ ಹಾಗೂ ಹೊಟ್ಟೆನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ.
ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಮತ್ತು ಸಂಧ್ಯಾರಾಣಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ವಿಷಕಾರಿ ಅಂಶಗಳ ಬಳಕೆ ಅಥವಾ ಇತರೆ ಯಾವುದೇ ಕಾರಣಗಳಿವೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ, ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಹಾಗೂ ತನಿಖೆಯ ಬಳಿಕ ಘಟನೆಯ ನಿಖರ ಕಾರಣ ಬಹಿರಂಗವಾಗುವ ನಿರೀಕ್ಷೆಯಿದೆ.






