ಬೀದರ್ | ಸಾಲಬಾಧೆ ತಾಳಲಾರದೆ ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ

ಬೀದರ್ : ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾಲ್ಕಿ ತಾಲೂಕಿನ ಹಾಲ ಹಿಪ್ಪರಗಾ ಗ್ರಾಮದಲ್ಲಿ ರವಿವಾರ ಮುಂಜಾನೆ ಜರುಗಿದೆ.
ಹಾಲ ಹಿಪ್ಪರಗಾ ಗ್ರಾಮದ ನಿವಾಸಿ ಶ್ರೀದೇವಿ (35) ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆಯಾಗಿದ್ದಾರೆ.
ಶ್ರೀದೇವಿ ಅವರ ಮಾವನಿಗೆ 1 ಎಕರೆ 20 ಗುಂಟೆ ಹೊಲ ಇದ್ದು, ಅವರ ಮಾವನಿಗೆ ವಯಸ್ಸಾದ ಕಾರಣ ಶ್ರೀದೇವಿ ಮತ್ತು ಆಕೆಯ ಪತಿ ಸೇರಿ ಆ ಹೊಲದಲ್ಲಿ ಒಕ್ಕಲುತನ ಮಾಡುತಿದ್ದರು. ಹಾಗೆಯೇ ಬೇರೆಯವರ 14 ಎಕರೆ ಹೊಲ ಪ್ರತಿ ವರ್ಷಕ್ಕೆ 3 ಲಕ್ಷ ರೂ. ಕೊಟ್ಟು ಅಲ್ಲಿಯೂ ಕೃಷಿ ಮಾಡುತಿದ್ದರು. ಇವರಿಗೆ 10 ಲಕ್ಷ ರೂ. ಸಾಲವಾಗಿತ್ತು. ಎರಡು ವರ್ಷದಿಂದ ಹೊಲದಲ್ಲಿ ಚೆನ್ನಾಗಿ ಬೆಳೆ ಬೆಳೆದಿರದ ಕಾರಣ ಸಾಲ ಕಟ್ಟಲಾಗದೆ ಚಿಂತೆಗಿಡಾಗಿದ್ದರು. ಇದೆ ಚಿಂತೆಯಲ್ಲಿ ಶ್ರೀದೇವಿ ಅವರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.





