ಸೆ.12 ರಂದು ಬೀದರ್ ವಿಶ್ವವಿದ್ಯಾಲಯದ ಮೊದಲನೇ ಘಟಿಕೋತ್ಸವ: ಕುಲಪತಿ ಪ್ರೊ.ಬಿ.ಎಸ್ ಬಿರಾದಾರ್
ಇಬ್ಬರಿಗೆ ಗೌರವ ಡಾಕ್ಟರೇಟ್ ಪದವಿ, 20 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

ಬೀದರ್: ಸೆ. 12 ರಂದು ಬೀದರ್ ವಿಶ್ವವಿದ್ಯಾಲಯದ ಮೊದಲನೇ ಘಟಿಕೋತ್ಸವ ಕಾರ್ಯಕ್ರಮ ನಗರದ ಹೊರವಲಯದಲ್ಲಿರುವ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್ ಬಿರಾದಾರ್ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀದರ್ ವಿಶ್ವವಿದ್ಯಾಲಯದ ಆವರಣದಲ್ಲಿ ಸೂಕ್ತ ಸ್ಥಳದ ಕೊರತೆ ಇರುವುದರಿಂದ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಈ ಘಟಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಘಟಿಕೋತ್ಸವ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ. ರಾಜ್ಯಪಾಲ ಥಾವರಚಂದ್ ಗೇಹ್ಲೋಟ್ ಅವರು ಈ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರಡ್ಡಿ ಅವರು ಉಪಸ್ಥಿತರಿರುವರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಇಬ್ಬರಿಗೆ ಗೌರವ ಡಾಕ್ಟರೆಟ್ ಪದವಿ:
ಸಾಮಾಜಿಕ ಸೇವೆ ಸಲ್ಲಿಸಿದ ಶಿವಯ್ಯ ಸ್ವಾಮಿ ಕಮಠಾಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಎಸ್.ಎಂ ಜನವಾಡಕರ್ ಅವರಿಗೆ ಬೀದರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಲಾಗುತ್ತಿದೆ.
20 ವಿದ್ಯಾರ್ಥಿಗಳಿಗೆ ಚಿನ್ನದ ಪದಕ: ವಿಶ್ವವಿದ್ಯಾಲಯದ ಎಲ್ಲ ವಿಭಾಗದ ಒಬ್ಬೊಬ್ಬ ವಿದ್ಯಾರ್ಥಿಗೆ ಚಿನ್ನದ ಪದವಿ ಪ್ರದಾನ ಮಾಡಲಾಗುವುದು. ಒಟ್ಟು 20 ಚಿನ್ನದ ಪದವಿಗಳು ಪ್ರದಾನ ಮಾಡಲಾಗುವುದು. ಅದರಲ್ಲಿ ಸ್ನಾತ್ತಕ ಪದವಿ (ಬಿ.ಎಡ್) ನ ಒಬ್ಬ ವಿದ್ಯಾರ್ಥಿನಿಗೆ ಹಾಗೂ 19 ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದವಿ ಪ್ರದಾನ ಮಾಡಲಾಗುವುದು. ಹಾಗೆಯೇ ಒಟ್ಟು 112 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಬೀದರ್ ವಿಶ್ವವಿದ್ಯಾಲಯಕ್ಕೆ ಒಟ್ಟು 322 ಎಕರೆ ಭೂಮಿ ಇದೆ. ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಒಂದೊಂದಾಗಿ ಎಲ್ಲ ವ್ಯವಸ್ಥೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗುವುದು. ಸದ್ಯಕ್ಕೆ 65 ಜನರು ಪ್ರಾಧ್ಯಾಪಕರಿದ್ದು, ಅದರಲ್ಲಿ ಒಂದು ಮಾತ್ರ ಖಾಯಂ ಹುದ್ದೆಯಾಗಿದೆ, ಉಳಿದ 64 ಹುದ್ದೆಗಳು ಅತಿಥಿ ಉಪನ್ಯಾಸಕರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಲ ಸಚಿವ ಪರಮೇಶ್ವರ್ ನಾಯಕ್, ಸಿಂಡಿಕೆಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿಂಗ್, ಶಿವನಾಥ್ ಪಾಟೀಲ್, ವಿಠಲದಾಸ್ ಪ್ಯಾಗೆ, ವೈಷ್ಣವಿ ಪಾಟೀಲ್, ಸಚಿನ್ ಮಲ್ಕಾಪುರೆ, ಅಬ್ದುಲ್ ಸತ್ತಾರ್ ಹಾಗೂ ಇತರರು ಇದ್ದರು.






