Bidar | ಅಪರಿಚಿತ ವ್ಯಕ್ತಿ ಮೃತ್ಯು : ವಾರಸುದಾರರ ಪತ್ತೆಗೆ ಮನವಿ

ಸಾಂದರ್ಭಿಕ ಚಿತ್ರ
ಬೀದರ್ : ನಗರದ ಗುರುನಾನಕ್ ಆಸ್ಪತ್ರೆಯ ಮುಂಭಾಗದ ರಸ್ತೆ ಪಕ್ಕದ ಕಟ್ಟೆಯ ಮೇಲೆ ಸುಮಾರು 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರ ಗುರುತು ಪತ್ತೆಗೆ ನೂತನ ನಗರ ಪೊಲೀಸ್ ಠಾಣೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಫೆಬ್ರವರಿ 1ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಗುರುನಾನಕ್ ಆಸ್ಪತ್ರೆಯಲ್ಲಿ ಸಿಸಿಟಿವಿ ಸರ್ವೇಲೆನ್ಸ್ ಕೆಲಸ ನಿರ್ವಹಿಸುತ್ತಿರುವ ಸಿಮನ್ (36) ಅವರು ಕರ್ತವ್ಯಕ್ಕೆ ಬಂದ ವೇಳೆ ಆಸ್ಪತ್ರೆ ಎದುರಿನ ಕಟ್ಟೆಯ ಮೇಲೆ ವ್ಯಕ್ತಿಯೊಬ್ಬರು ಮಲಗಿರುವುದು ಗಮನಕ್ಕೆ ಬಂದಿದೆ. ಭಿಕ್ಷುಕನಂತೆ ಕಾಣಿಸುತ್ತಿದ್ದ ಆ ವ್ಯಕ್ತಿಯನ್ನು ಎಬ್ಬಿಸಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಿದಾಗ, ಆತ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಸಿಮನ್ ನೀಡಿದ ದೂರಿನ ಮೇರೆಗೆ ನೂತನ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 04/2026, ಕಲಂ 194 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಮೃತ ವ್ಯಕ್ತಿಯು ಸುಮಾರು 4 ಅಡಿ 8 ಇಂಚು ಎತ್ತರ, ಸಾಧಾರಣ ಮೈಕಟ್ಟು ಹಾಗೂ ಕಪ್ಪು ಮೈಬಣ್ಣ ಹೊಂದಿದ್ದು, ಮೈಮೇಲೆ ಕಪ್ಪು ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಅಥವಾ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದ್ದರೆ ತಕ್ಷಣವೇ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ರನ್ನು 94808 03446 ಸಂಖ್ಯೆಗೆ ಅಥವಾ ಬೀದರ್ ಪೊಲೀಸ್ ನಿಯಂತ್ರಣ ಕೊಠಡಿ 08482-226704 ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.






