Bidar | ಬ್ರಿಮ್ಸ್ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿ ಮೃತ್ಯು : ಗುರುತು ಪತ್ತೆಗಾಗಿ ಮನವಿ

ಸಾಂದರ್ಭಿಕ ಚಿತ್ರ
ಬೀದರ್ : ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುಮಾರು 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೃತರ ಗುರುತು ಪತ್ತೆಗೆ ನೂತನ ನಗರ ಪೊಲೀಸ್ ಠಾಣೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಏಪ್ರಿಲ್ 8ರಂದು ರಾತ್ರಿ ಸುಮಾರು 8:22 ಗಂಟೆಗೆ ಅಪರಿಚಿತ ವ್ಯಕ್ತಿಯನ್ನು ನಗರದ ಬ್ರಿಮ್ಸ್ ಆಸ್ಪತ್ರೆಯ ಅನಾಥ ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 13ರಂದು ಬೆಳಿಗ್ಗೆ 10:10 ಗಂಟೆಗೆ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಬ್ರಿಮ್ಸ್ ಆಸ್ಪತ್ರೆಯ ಡಾ. ಸಂತೋಷ್ ಎಸ್. ಭಂಗೂರೆ ಅವರು ನೀಡಿದ ದೂರಿನ ಮೇರೆಗೆ ಬೀದರ್ ನೂತನ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 12/2026, ಕಲಂ 194 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ ವ್ಯಕ್ತಿಯು ಸುಮಾರು 4 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು ಹಾಗೂ ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಹಳದಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ ಎಂದು ವಿವರಿಸಲಾಗಿದೆ.
ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಅಥವಾ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದ್ದರೆ ತಕ್ಷಣವೇ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ರನ್ನು 94808 03446 ಸಂಖ್ಯೆಗೆ ಅಥವಾ ಬೀದರ್ ಪೊಲೀಸ್ ನಿಯಂತ್ರಣ ಕೊಠಡಿ 08482-226704 ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.






