ಬೀದರ್ | ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದ ವಕೀಲನನ್ನು ಗಡಿಪಾರು ಮಾಡಲು ವಿವಿಧ ದಲಿತ ಸಂಘಟನೆಗಳಿಂದ ಒತ್ತಾಯ
ಬೀದರ್ : ಸಿಜೆಐ ಬಿ.ಆರ್ ಗವಾಯಿ ಅವರಿಗೆ ಶೂ ಎಸೆಯಲು ಯತ್ನಿಸಿದ ವಕೀಲರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ ಗಡಿಪಾರು ಮಾಡಬೇಕು ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿವೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಬಿ.ಆರ್ ಗವಾಯಿ ಅವರಿಗೆ ಶೂ ಎಸೆದ ಘಟನೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ. ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಬೇಕು. ಈ ದೇಶದ ಬೌದ್ಧ (ಎಸ್ಸಿ) ವ್ಯಕ್ತಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದು, ಮೇಲ್ಜಾತಿ ಮನುವಾದಿಗಳಿಗೆ ಸಹಿಸಲಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಮೇಲೆ ಮನುವಾದಿಗಳು ಹಲ್ಲೆ ಮಾಡುತ್ತಾರೆ. ಹೀಗಿದ್ದಲ್ಲಿ ಈ ದೇಶದ ಅಸಹಾಯಕ ದಲಿತರ ಸ್ಥಿತಿ ಹೇಗೆ ಎಂಬುದರ ಬಗ್ಗೆ ಉನ್ನತ ಸ್ಥಾನದಲ್ಲಿ ಕುಳಿತು ದಲಿತರ ಒಮ್ಮೆ ಅಲೋಚಿಸಬೇಕಿದೆ. ದೇಶದ ವಕೀಲರು, ಎಲ್ಲ ಸಂಘಟನೆಗಳು ಈ ಘಟನೆ ಖಂಡಿಸಿ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಬೆಂಬಲಿಸಿ ಪ್ರತಿರೋಧ ವ್ಯಕ್ತಪಡಿಸುವುದು ತುಂಬಾ ಅಗತ್ಯವಾಗಿದೆ. ಇಂದು ದೇಶದಲ್ಲಿ ಒಂದು ಕಪ್ಪು ಚುಕ್ಕೆ ದಿನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಇಂದು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಬಿ.ಆರ್ ಗವಾಯಿ ಅವರ ಮೇಲೆ ಕೋರ್ಟ್ ಹಾಲ್ ನಲ್ಲಿ ಮಧ್ಯಾಹ್ನ ವಕೀಲರೊಬ್ಬರು ತನ್ನ ಕಾಲಿನಲ್ಲಿರುವ ಬೂಟನ್ನು ಅವರ ಮೇಲೆ ಎಸೆದು ದೇಶದ ನಾಗರಿಕ ಸಮಾಜಕ್ಕೆ ತಲೆತಗ್ಗಿಸುವಂತೆ ಮಾಡಿದ್ದಾರೆ. ಇದನ್ನು ಬೀದರ್ ಜಿಲ್ಲಾ ಸಂವಿಧಾನ ಸಂರಕ್ಷಣಾ ಸಮಿತಿ, ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಅನಿಲಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ಬಾಬುರಾವ್ ಪಾಸ್ವಾನ್, ಪ್ರದೀಪ್ ನಾಟೇಕರ್, ಶ್ರೀಪತರಾವ್ ದೀನೆ, ಶಿವಕುಮಾರ್ ನೀಲಿಕಟ್ಟಿ ಸೇರಿದಂತೆ ಅನೇಕರು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೂಟು ಎಸೆದ ವಕೀಲರ ಪರವಾನಗಿ ರದ್ದುಪಡಿಸಿ ಅವರನ್ನು ದೇಶದಿಂದ ಗಡಿಪಾರು ಮಾಡುವ ಮೂಲಕ ದೇಶದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ಈ ಕುತಂತ್ರದ ಹಿಂದೆ ಯಾರಿದ್ದಾರೆ ಎನ್ನುವುದು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.







