Bidar | ‘ವಿದ್ಯಾರ್ಥಿ ಆರೋಗ್ಯ ಬಂಧು’ ಪುಸ್ತಕ ಲೋಕಾರ್ಪಣೆ
25 ಸಾವಿರ ವಿದ್ಯಾರ್ಥಿಗಳ ಮಾಸಿಕ ಆರೋಗ್ಯ ತಪಾಸಣೆಗೆ ಜಿಲ್ಲಾಡಳಿತದ ಹೊಸ ಉಪಕ್ರಮ

ಬೀದರ್: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಅವರೊಂದಿಗೆ ‘ವಿದ್ಯಾರ್ಥಿ ಆರೋಗ್ಯ ಬಂಧು’ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಆರೋಗ್ಯದ ಸಮಗ್ರ ಮೇಲ್ವಿಚಾರಣೆಗಾಗಿ ಈ ವಿಶೇಷ ಉಪಕ್ರಮ ಜಾರಿಗೆ ತರಲಾಗಿದೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಿದ್ದು, ತಪಾಸಣೆ ವೇಳೆ ಕಂಡುಬರುವ ಆರೋಗ್ಯ ಸಮಸ್ಯೆಗಳು ಹಾಗೂ ವೈದ್ಯರ ಸಲಹೆಗಳನ್ನು ‘ವಿದ್ಯಾರ್ಥಿ ಆರೋಗ್ಯ ಬಂಧು’ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ.
ಈ ಪುಸ್ತಕದ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು, ಮುಂದಿನ ಆರೋಗ್ಯ ತಪಾಸಣೆ ವೇಳೆ ಅವರ ಆರೋಗ್ಯದ ಪ್ರಗತಿಯನ್ನು ಸುಲಭವಾಗಿ ಪರಿಶೀಲಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಸಾಗರ್ ಖಂಡ್ರೆ, ಶಾಸಕ ರಹೀಂ ಖಾನ್, ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ, ಬುಡಾ ಅಧ್ಯಕ್ಷ ವಿನೋದ್ ಅಪ್ಪೆ ಸೇರಿದಂತೆ ಇತರರು ಇದ್ದರು.






