Bidar | ಮೇಲಾಧಿಕಾರಿಗಳ ಒತ್ತಡ ಆರೋಪ : ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ

ಮಹಾದೇವ್
ಬಸವಕಲ್ಯಾಣ: ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಾಯಂಕಾಲ ಸುಮಾರು 4 ಗಂಟೆಗೆ ನಡೆದಿದ್ದು, ಮೇಲಾಧಿಕಾರಿಗಳ ಒತ್ತದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಕಾಂಬಳಿ ವಾಡಿ ಗ್ರಾಮದ ನಿವಾಸಿ ಮಹಾದೇವ್ (30) ಆತ್ಮಹತ್ಯೆ ಮಾಡಿಕೊಂಡವರು.
ತಾಲೂಕಿನ ಉಮ್ಮಾಪುರ್ ಹಾಗೂ ಹಳ್ಳಿ ಗ್ರಾಮದಲ್ಲಿ ಮಹಾದೇವ್ ಅವರು ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕೆಲಸಕ್ಕೆ ಸೇರಿ ಒಂದು ವರ್ಷವಷ್ಟೇ ಕಳೆದಿತ್ತು. ಕೆಲಸದಲ್ಲಿ ಮೇಲಾಧಿಕಾರಿಗಳ ಒತ್ತಡ ಹೆಚ್ಚಾಗಿದೆ ಎಂದು ತನ್ನ ತಾಯಿಯ ಹತ್ತಿರ ಅವರು ಹೇಳಿಕೊಂಡಿದ್ದು, ಕುಟುಂಬಸ್ಥರು ಅವರಿಗೆ ಸಮಾಧಾನ ಕೂಡ ಹೇಳಿದ್ದರು ಎನ್ನಲಾಗಿದೆ.
"ನನ್ನ ಮಗ ಕೆಲಸಕ್ಕೆ ಸೇರಿ ಕೇವಲ ಒಂದು ವರ್ಷವಾಗಿತ್ತು. ಮೇಲಾಧಿಕಾರಿಗಳ ಒತ್ತಡ ಹೆಚ್ಚಾಗಿದೆ ಎಂದು ನನ್ನ ಬಳಿ ಹೇಳಿದ್ದ. ಈಗ ನನ್ನ ಮಗ ಪ್ರಾಣವನ್ನೇ ಬಿಟ್ಟಿದ್ದಾನೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿ" ಎಂದು ಮೃತನ ತಾಯಿ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಪ್ರಕಾಶ್ ಕುದ್ರೆ ಹಾಗೂ ತಹಸೀಲ್ದಾರ್ ಅವರ ಮುಂದೆ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಮಾಧ್ಯಮದ ಜೊತೆ ಮಾತನಾಡಿದ ಪ್ರಕಾಸ್ ಕುದ್ರೆ ಅವರು, ಈಗಾಗಲೆ ಈ ಕುರಿತು ಮಂಠಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾನೂ ಡಿವೈಎಸ್ಪಿ ಜೊತೆ ಮಾತನಾಡಿದ್ದೇನೆ. ಒಂದು ವೇಳೆ ಮೇಲಾಧಿಕಾರಿಗಳು ಕಿರುಕುಳ ನೀಡಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಂಠಾಳ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






