Bidar | 30 ವರ್ಷಗಳಿಂದ ಬಾಕಿ ಉಳಿದ ನಿವೇಶನ ಹಂಚಿಕೆಗೆ ಗ್ರಾಮಸ್ಥರ ಆಗ್ರಹ

ಬೀದರ್: ಬಸವಕಲ್ಯಾಣ ತಾಲೂಕಿನ ಮುಕುಳಂಬ ಗ್ರಾಮದಲ್ಲಿ 1996ರಲ್ಲಿ ಬಡ ದಲಿತ ಕುಟುಂಬಗಳಿಗೆ ಮಂಜೂರಾದ ನಿವೇಶನಗಳನ್ನು ಕೂಡಲೇ ಗುರುತಿಸಿ ಹಂಚಿಕೆ ಮಾಡಬೇಕು ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮುಕುಳಂಬ ಗ್ರಾಮದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ ಗ್ರಾಮಸ್ಥರು, ಸರ್ವೆ ನಂ.405ರಲ್ಲಿ ಸುಮಾರು 40 ಫಲಾನುಭವಿಗಳಿಗೆ ಮೇ 8, 1996ರಂದು ಹಕ್ಕುಪತ್ರ ನೀಡಲಾಗಿದ್ದರೂ, ಇದುವರೆಗೆ ನಿವೇಶನಗಳ ಅಳತೆ, ರಸ್ತೆ ನಿರ್ಮಾಣ ಅಥವಾ ಗಡಿ ಗುರುತು ಮಾಡಿಲ್ಲ ಎಂದು ದೂರಿದರು.
ನಿವೇಶನಗಳ ಸ್ಥಳ ಗುರುತಿಸಲಾಗದ ಕಾರಣ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸರ್ವೆ ನಂ.405ರ ಸುತ್ತಮುತ್ತಲಿನ ಜಮೀನನ್ನು ಖಾಸಗಿ ಪಟ್ಟೆದಾರರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ಸರ್ವೆ ನಂ.405ನ್ನು ಮರುಸರ್ವೆ ನಡೆಸಿ, ಪ್ರತಿಯೊಬ್ಬ ಫಲಾನುಭವಿಯ ನಿವೇಶನವನ್ನು ಗುರುತಿಸಿ ಹಂಚಿಕೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದೇವಾನಂದ್ ತೊಳೆ, ಜೈವಂತ್ ಸಿಂಗಾರೆ, ಸಂದೀಪ್ ಮುಕಿಂದೆ, ರೋಹಿತ್ ಸಿಂಗಾರೆ, ಕರನ್ ಸೋನಫುಲೆ, ಅಜಯ್ ಮದಾಳೆ, ರವಿ ಹುಂಚಗೆರೆ ಸೇರಿದಂತೆ ಗ್ರಾಮಸ್ಥರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.






